ಕುಂದಾಪುರ, ಅ 22 (DaijiworldNews/SM): ಬಹುದಿನಗಳ ಬೇಡಿಕೆಯಾದ ಎರ್ನಾಕುಲಂ ಪುಣೆ ಸೂಪರ್ ಫಾಸ್ಟ್ ರೈಲಿಗೆ ಮೊದಲ ಬಾರಿಗೆ ಕುಂದಾಪುರದಲ್ಲಿ ನಿಲುಗಡೆ ದೊರಕಿದೆ. ಈ ಹಿನ್ನೆಲೆಯಲ್ಲಿ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯಿಂದ ಮಂಗಳವಾರ ಮಧ್ಯಾಹ್ನ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಎರ್ನಾಕುಲಂ ಪುಣೆ ಸೂಪರ್ ಫಾಸ್ಟ್ ರೈಲಿನ ನಿಲುಗಡೆಯಿಂದಾಗಿ ಪುಣೆ ಗೋವಾ ಪನ್ವೇಲ್ ಹೋಗುವವರಿಗೆ ಅನುಕೂಲವಾಗಲಿದೆ. ವಾರದಲ್ಲಿ ಎರಡು ಬಾರಿ ಈ ರೈಲು ಸಂಚರಿಸಲಿದ್ದು, ಪ್ರತೀ ಮಂಗಳವಾರ ಮತ್ತು ಶುಕ್ರವಾರ ಎರ್ನಾಕುಲಂನಿಂದ ಪುಣೆಗೆ ಪ್ರಯಾಣಿಸಲಿದೆ. ಸೋಮವಾರ ಮತ್ತು ಗುರುವಾರ ಪುಣೆಯಿಂದ ಎರ್ನಾಕುಲಂಗೆ ಪ್ರಯಾಣಿಸಲಿದೆ. ಎರ್ನಾಕುಲಂನಿಂದ ಬರುವ ರೈಲು ಬೆಳಿಗ್ಗೆ 11.20ಕ್ಕೆ ಕುಂದಾಪುರ ತಲುಪಲಿದೆ. ಪುಣೆಯಿಂದ ಬರುವ ಈ ರೈಲು ಮಧ್ಯಾಹ್ನ 2.15ಕ್ಕೆ ಆಗಮಿಸಲಿದೆ. ಎರಡು ನಿಮಿಷದ ನಿಲುಗಡೆಯಿಂದಾಗಿ ಕುಂದಾಪುರದ ರೈಲು ಪ್ರಯಾಣಿಕರಿಗೆ ಈ ರೈಲಿನಿಂದ ಬಹಳಷ್ಟು ಅನುಕೂಲವಾಗಲಿದೆ ಎಂದು ಹಿತರಕ್ಷಣಾ ಸಮಿತಿಯವರು ತಿಳಿಸಿದ್ದಾರೆ.
ಕಳೆದ ಒಂಭತ್ತು ವರ್ಷಗಳಿಂದ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಹೋರಾಟ ನಡೆಸುತ್ತಿದ್ದು, 17 ರೈಲುಗಳಿಗೆ ಕುಂದಾಪುರದಲ್ಲಿ ನಿಲುಗಡೆ ಲಭ್ಯವಾಗಿದೆ. ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ಹೋರಾಟಕ್ಕೆ ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಬೆಂಬಲದಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಅವರು ಇದೇ ಸಂದರ್ಭ ಹೇಳಿದರು. ರೈಲಿನ ಸ್ವಾಗತಕ್ಕೆ ಹಿತರಕ್ಷಣಾ ಸಮಿತಿಯ ಜೊತೆಗೆ ಜೈ ಭಾರ್ಗವ ಬಳಗದ ಸದಸ್ಯರು ಹಾಜರಿದ್ದರು.