ಮುಡಿಪು, ಅ 22 (DaijiworldNews/SM): ಇಲ್ಲಿನ ನಿವಾಸಿ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಕೆಥೊಲಿಕ್ ಸಭಾ ನಿಯೋಗ ಮಂಗಳವಾರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದೆ. ಹಾಗೂ ಬಾಲಕಿಯ ಪತ್ತೆಗಾಗಿ ಆಗ್ರಹಿಸಿದೆ.
ಮುಡಿಪು ನಿವಾಸಿ, ಮಂಗಳೂರಿನ ಖಾಸಗಿ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಅಕ್ಟೋಬರ್ ತಿಂಗಳ 8ರಂದು ಮನೆಯಿಂದ ನಾಪತ್ತೆಯಾಗಿದ್ದಳು. ಈ ಬಗ್ಗೆ ಕೊಣಾಜೆ ಠಾಣೆಗೆ ದೂರು ನೀಡಲಾಗಿದೆ. ಕೇಸು ದಾಖಲಿಸಿ 12 ದಿನಗಳಾದರೂ ಪ್ರಯೋಜನವಾಗಿಲ್ಲ.
ಇದರಿಂದ ಬೇಸತ್ತ ಬಾಲಕಿಯ ತಂದೆ ಕೆಥೊಲಿಕ್ ಸಭಾ ನಿಯೋಗದ ಜೊತೆ ಪೊಲೀಸ್ ಉಪ ಆಯುಕ್ತ ಅರುಣಾಂಶುಗಿರಿ ಮುಖಾಂತರ ಕಮೀಷನರ್ ಅವರಿಗೆ ಮನವಿ ಸಲ್ಲಿಸಲಾಗಿದೆ. ಒಂದು ವಾರದೊಳಗೆ ಬಾಲಕಿ ಪತ್ತೆಯಾಗದಿದ್ದರೆ ಕೆಥೊಲಿಕ್ ಸಭಾ ಮುಡಿಪು ಘಟಕ, ದಕ್ಷಿಣ ವಲಯ, ಕೇಂದ್ರೀಯ ಸಮಿತಿ ನೇತೃತ್ವದಲ್ಲಿ ಕೊಣಾಜೆ ಠಾಣೆಗೆ ಮುತ್ತಿಗೆ ಹಾಕಿ ಧರಣಿ ನಡೆಸಲಾಗುವುದು ಎಂದು ಕೆಥೊಲಿಕ್ ಸಭಾ ಕೇಂದ್ರೀಯ ಸಮಿತಿ ಅಧ್ಯಕ್ಷ ರೋಲ್ಫಿ ಡಿಕೋಸ್ತ ಎಚ್ಚರಿಸಿದ್ದಾರೆ.