ಮಂಗಳೂರು, ಅ 22 (Daijiworld News/MSP): ಯುವಕನೋರ್ವನ ಕೊಲೆಗೆ ಯತ್ನಿಸಿದ ನಟೋರಿಯಸ್ ಗ್ಯಾಂಗ್ ನ್ನು ಮಂಗಳೂರು ಪೊಲೀಸರು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ನಿತಿನ್ ಪೂಜಾರಿ, ಧನರಾಜ್, ಶಿವನಾಂದ್ ಆಚಾರಿ, ಗಣೇಶ್, ಜೀವನ್ ಪೂಜಾರಿ, ಸಂತೋಷ್ ಪೂಜಾರಿ, ಧೀರಜ್ ಸಫಲ್ಯ, ರಾಘವೇಂದ್ರ ಪೂಜಾರಿ, ಪ್ರಣೇಶ್ ಪೂಜಾರಿ ಎಂದು ಗುರುತಿಸಲಾಗಿದೆ.
ಘಟನೆಯ ವಿವರ: ನಗರದ ಹೊರ ವಲಯದ ದೇವಸ್ಥಾನವೊಂದರಲ್ಲಿ ಅ. 16 ರ ಬುಧವಾರ ನಾಲ್ವರು ಮದ್ಯ ಸೇವಿಸಿ ಮೋಜು-ಮಸ್ತಿ ನಡೆಸುತ್ತಿದ್ದರು. ಇದನ್ನು ನೋಡಿದ್ದ ಗಮನಿಸಿದ್ದ ಆಟೋಚಾಲಕ ಸಂತೋಷ್ (35)ಎಂಬಾತ ದೇವಸ್ಥಾನದ ಬಳಿ ಮೋಜು-ಮಸ್ತಿ ಮಾಡುವುದನ್ನು ವಿರೋಧಿಸಿ ಬೈದು ಕಳುಹಿಸಿದ್ದರು ಎನ್ನಲಾಗಿದೆ. ಇದರಿಂದ ಕೋಪಗೊಂಡಿದ್ದ ದುಷ್ಕರ್ಮಿಗಳು ಸಂತೋಷ್ ಕೊಲೆಗೆ ಪ್ಲ್ಯಾನ್ ರೂಪಿಸಿದ್ದರು. ಸಂತೋಷ್ ಗಾಗಿ ಹೊಂಚು ಹಾಕಿದ್ದ ತಂಡ ಅ. 17 ರಂದುನೀರುಮಾರ್ಗ ಬಿತ್ತುಪಾದೆ ಬಳಿ ಬೈಕ್ ನಲ್ಲಿ ಮನೆಗೆ ತೆರಳುತ್ತಿದ್ದ ಸಂತೋಷ್ ಮೇಲೆ ತಲವಾರು ದಾಳಿ ನಡೆಸಿ ಬಳಿಕ ಸ್ಥಳದಿಂದ ಪರಾರಿಯಾಗಿದ್ದರು.
ಪರಿಣಾಮ ಸಂತೋಷ್ ಕಾಲು , ಹಣೆ, ಕೈಗೆ ಗಂಭೀರ ಗಾಯವಾಗಿತ್ತು. ಎಡಕೈಯ ಹೆಬ್ಬೆರಳು ತುಂಡಾಗಿತ್ತು. ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಕುರಿತು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.