ಉಳ್ಳಾಲ, ಅ 22 (Daijiworld News/MSP): ಅತ್ಯಂತ ಅಪರೂಪ ಎನಿಸಿರುವ ಯುವಕನ ಕೈಗೆ ಆಗಿದ್ದ ಮೂಳೆ ಕ್ಯಾನ್ಸರ್ ಗೆ ಶಸ್ತ್ರ ಚಿಕಿತ್ಸೆ ನಡೆಸಿರುವ ದೇರಳಕಟ್ಟೆ ಯೇನೆಪೊಯ ಆಸ್ಪತ್ರೆಯ ವೈದ್ಯರ ತಂಡ ಆತನ ಕೈಯನ್ನು ಉಳಿಸುವಲ್ಲಿ ಯಶಸ್ವಿಯಾಗಿದೆ.
ಈ ಬಗ್ಗೆ ಸೋಮವಾರ ಯೇನೆಪೊಯ ಆಸ್ಪತ್ರೆಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದ ಓಂಕೋಲಜಿ ವಿಭಾಗದ ಮುಖ್ಯಸ್ಥ ಡಾ.ಜಲಾಲುದ್ದೀನ್ ಅಕ್ಬರ್ ಕೆ.ಸಿ., ಕ್ಯಾನ್ಸರ್ ಕಾಯಿಲೆ ಸಾಮಾನ್ಯವಾಗಿ 60 ವರ್ಷಗಳ ಬಳಿಕ ಬರುತ್ತದೆ, ಆದರೆ ಆಸ್ಟ್ರೇಜನಿಕ್ ಎನ್ನುವ ಮೂಳೆ ಕ್ಯಾನ್ಸರ್ ಕಾಯಿಲೆ 20-30 ವರ್ಷದ ಯುವಕರಲ್ಲಿ ಕಾಲಿನಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ ಉಳ್ಳಾಲದ 30 ವರ್ಷದ ಯುವಕನ ಬಲಕೈಯಲ್ಲಿ ಅದೂ ಮಧ್ಯಭಾಗದಲ್ಲೇ ಮೂಳೆ ಕ್ಯಾನ್ಸರ್ ಕಾಣಿಸಿಕೊಂಡಿತ್ತು. ಇದು ಅತ್ಯಪರೂಪದ ಪ್ರಕರಣವಾಗಿದ್ದು ಒಂದೋ ಕೈಯನ್ನೇ ಕತ್ತರಿಸುವುದು, ಇಲ್ಲವೇ ಕೃತಕ ಲೋಹ ಜೋಡಿಸುವುದು ಮಾಡಬೇಕಿತ್ತು. ನಾವು ಕೃತಕ ಲೋಹ ಬಳಸಿ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಸಿ ಕೃತಕ ಲೋಹದ ಮೂಳೆ ಜೋಡಿಸಿ ಕೈಯನ್ನು ಉಳಿಸಿ ಯುವಕನಿಗೆ ಮರುಜೀವನ ನೀಡಲಾಗಿದೆ ಎಂದರು.
ಹಿಂದೆಲ್ಲಾ ಮೂಳೆ ಕ್ಯಾನ್ಸರ್ ಬಂದರೆ ನಿಗದಿತ ಅಂಗವೇ ಕತ್ತರಿಸಲಾಗುತ್ತಿತ್ತು, ಯುವಕನಿಗೆ ಬಲಕೈಯ ಒಂದು ಭಾಗದ ಮೂಳೆಯಲ್ಲಿ ಕ್ಯಾನ್ಸರ್ ಆಗಿರದೆ ಮಧ್ಯದಲ್ಲೇ ಬಂದಿತ್ತು. ಹಿಂದೆಲ್ಲಾ ಇದರ ಚಿಕಿತ್ಸೆಗಾಗಿ ಮುಂಬೈ ಅಥವಾ ಚೆನ್ನೈಗೆ ಹೋಗಬೇಕಿದ್ದು, ಅಲ್ಲಿ ಕನಿಷ್ಟ ಎಂದರೂ 10ರಿಂದ 15 ಲಕ್ಷ ರೂಪಾಯಿ ವ್ಯಯಿಸಬೇಕಿತ್ತು. ಆದರೆ ಇದೀಗ ಯೇನೆಪೊಯ ಆಸ್ಪತ್ರೆಯಲ್ಲಿ ಯಶಸ್ವೀ ಚಿಕಿತ್ಸೆ ನಡೆಸಲಾಗಿದ್ದು ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಸರ್ಜರಿಯಾಗಿದ್ದು, ಈ ಚಿಕಿತ್ಸೆಗಾಗಿ ಸಾಕಷ್ಟು ಅಧ್ಯಯನ ನಡೆಸಲಾಗಿತ್ತು. ಇಂತಹ ಸರ್ಜರಿ ನಮ್ಮಲ್ಲೂ ಆಗುತ್ತದೆ ಎಂದು ತೋರಿಸಲಾಗಿದೆ ಎಂದು ತಿಳಿಸಿದರು.
ವೈದ್ಯಕೀಯ ಅಧೀಕ್ಷಕ ಡಾ.ಪದ್ಮನಾಭ ಸಂಪತ್ತಿಲ ಮಾತನಾಡಿ, ಇಂತಹ ಶಸ್ತ್ರ ಚಿಕಿತ್ಸೆಗೆ ಆರಂಭದಿಂದ ಕೊನೆವರೆಗೆ ಆರು ತಿಂಗಳು ಬೇಕಿದ್ದು, ಕಿಮೋಥೆರಪಿ, ಸರ್ಜರಿ, ನಾಲ್ಕು ತಿಂಗಳು ಚುಚ್ಚುಮದ್ದು ನೀಡಬೇಕಾಗುತ್ತದೆ. ನಮ್ಮಲ್ಲಿ ಇಂತಹ ಶಸ್ತ್ರಚಿಕಿತ್ಸೆಯನ್ನು ಎರಡೂವರೆ ಲಕ್ಷ ವೆಚ್ಚದಲ್ಲಿ ಮಾಡಲಾಗುತ್ತದೆ, ಉಳ್ಳಾಲದ ಯುವಕನದ್ದು ಪ್ರಥಮ ಪ್ರಕರಣ ಆಗಿದ್ದರಿಂದ ಉಚಿತವಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಕೇಂದ್ರ ಸರ್ಕಾರದ ಆಯುಷ್ಮಾನ್ ಯೋಜನೆಯಡಿಯೂ ಚಿಕಿತ್ಸೆ ಲಭ್ಯವಿದ್ದರೂ ಹೆಚ್ಚಿನ ಹಣ ಪಾವತಿಸಬೇಕಾಗುತ್ತದೆ. ಯೋಜನೆ ಸಿಗದಿದ್ದರೂ ರಿಯಾಯಿತಿ ದರದಲ್ಲಿ ಚಿಕಿತ್ಸೆ ನಡೆಸಲಾಗುವುದು ಎಂದು ಹೇಳಿದರು.
ಮೆಡಿಕಲ್ ಓಂಕೋಲಾಜಿಸ್ಟ್ ಡಾ.ಗುರುಪ್ರಸಾದ್ ಭಟ್ ಮಾತನಾಡಿ, ಹೆಚ್ಚು ಉದ್ದ ಇರುವ ಮನುಷ್ಯ, ಪ್ರಾಣಿಗಳಿಗೂ ಮೂಳೆ ಕ್ಯಾನ್ಸರ್ ಸಾಮಾನ್ಯವಾಗಿ ಕಾಲಿಗೆ ಸಾಮಾನ್ಯವಾಗಿ ಬರುತ್ತದೆ. ಕೈಗೆ ಬರುವುದು ಅಪರೂಪವಾಗಿದ್ದು ಕೈಯಲ್ಲಿ 20-30 ಮಾಂಸ ಖಂಡಗಳಿರುವುದರಿಂದ ಶಸ್ತ್ರ ಚಿಕಿತ್ಸೆ ನಡೆಸಿ ಕೈಯನ್ನು ಉಳಿಸುವುದು ಅತ್ಯಂತ ಕಷ್ಟ. ಕೃತಕ ಕಬ್ಬಿಣದ ಮೂಳೆ ಭಾರ ಇರುವುದರಿಂದ ವಿಶೇಷ ಮೂಳೆ ಬಳಸಲಾಗಿದ್ದು, ಇದಕ್ಕೆ ಕನಿಷ್ಟ ಒಂದೂವರೆ ಲಕ್ಷ ಆಗುತ್ತದೆ ಎಂದು ವಿವರಿಸಿದರು.
ಓಂಕೋಲಜಿ ಮತ್ತು ರೊಬೋಟಿಕ್ ಘಟಕದ ಸಹಾಯಕ ಪ್ರಾಧ್ಯಾಪಕ ಡಾ.ರೋಹನ್ ಶೆಟ್ಟಿ, ಆಸ್ಪತ್ರೆಯ ಹಿರಿಯ ವೈದ್ಯ ಎಚ್.ಟಿ.ಅಮರ್ ರಾವ್, ಮೂಳೆ ವಿಭಾಗದ ಡಾ.ಇಮ್ತಿಯಾಣ್ ಅಹ್ಮದ್, ಡಾ.ಅಭಿಷೇಕ್ ಶೆಟ್ಟಿ, ಆಸ್ಪತ್ರೆಯ ಆಡಳಿತ ವಿಭಾಗ ಮುಖ್ಯಸ್ಥೆ ಡಾ.ಸುನಿತಾ ಸಲ್ದಾನ ಹಾಗೂ ಮಾರ್ಕೆಟಿಂಗ್ ವಿಭಾಗದ ವಿಜಯಾನಂದ ಶೆಟ್ಟಿ ಬಿ. ಉಪಸ್ಥಿತರಿದ್ದರು.