ಮಂಗಳೂರು, ಅ 22 (Daijiworld News/MSP): ಕಳೆದ ಬಾರಿಯ ಕಂಬಳ ಋತುವಿನಲ್ಲಿ ಕೋಣಗಳ ಮೇಲಿನ ಹಿಂಸೆ ಮತ್ತು ಕೌರ್ಯವನ್ನು ತಡೆಯಲು ವಿಫಲವಾಗಿದೆ ಎಂದು ಪೆಟಾ ಸಂಘಟನೆಯು ತನಿಖಾ ವರದಿ ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವುದಾಗಿ ತಿಳಿಸಿದೆ.
ಪೆಟಾ ಸಂಸ್ಥೆಯು ಡಿಸೆಂಬರ್ ಮತ್ತು ಜನವರಿ ಮತ್ತು ಫೆಬ್ರವರಿ ತಿಂಗಳಿನಲ್ಲಿ ನಡೆದ ಬಾರಾಡಿಬೀಡು, ಮೂಡುಬಿದಿರೆ, ಮಂಗಳೂರು ಮತ್ತು ತಿರುವೈಲ್ನಲ್ಲಿ ನಡೆದಿರುವ ಕಂಬಳಗಳ ತನಿಖೆ ಕೈಗೊಂಡಿದ್ದು, ಇಲ್ಲಿ ಕಂಬಳ ಕೋಣಗಳ ಮೇಲೆ ಚಿತ್ರ ಹಿಂಸೆ ತಡೆಗಟ್ಟಲು ಕರ್ನಾಟಕದ ಕಂಬಳಗಳು ವಿಫಲವಾಗಿದೆ ಎಂದು ಕೋರ್ಟ್ ಗೆ ನೀಡಿರುವ ವರದಿಯಲ್ಲಿ ತಿಳಿಸಿದೆ.
ಪೆಟಾ ಇಂಡಿಯಾದಿಂದ ತನಿಖೆ ನಡೆಸಿದ ಎಲ್ಲಾ ನಾಲ್ಕುಕಂಬಳ ಸ್ಪರ್ಧೆಯಲ್ಲಿ ರಾಜ್ಯದ ತಿದ್ದುಪಡಿಗಳು ಕೋಣಗಳನ್ನು ಹಿಂಸೆಯಿಂದ ರಕ್ಷಿಸುವಲ್ಲಿ ಎಷ್ಟು ಅನುಪಯುಕ್ತ ಎನ್ನುವುದನ್ನು ಎತ್ತಿ ತೋರಿಸುತ್ತದೆ. ಪೆಟಾ ದಾಖಲು ಮಾಡಿರುವ ದೂರು ಕರ್ನಾಟಕದ ಹೊಸ ಕಾನೂನಿನ ಸಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸುತ್ತದೆ ಮತ್ತು ಅದನ್ನು ಕಿತ್ತು ಹಾಕಲು ನಿರ್ದೇಶನವನ್ನು ಕೋರುತ್ತದೆ ಎಂದು ಪೆಟಾದ ಪ್ರಕಟನೆ ತಿಳಿಸಿದೆ.