ಉಡುಪಿ, ಅ 21 (DaijiworldNews/SM): ಶಿರ್ವ ಚರ್ಚ್ ನ ಸಹಾಯಕ ಧರ್ಮಗುರು ಹಾಗೂ ಡೋನ್ ಬಾಸ್ಕೋ ಶಾಲೆಯ ಪ್ರಾಂಶುಪಾಲ ಫಾ. ಮಹೇಶ್ ಅವರ ಆತ್ಮಹತ್ಯೆ ಪ್ರಕರಣದ ಕುರಿತಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಸುಳ್ಳು ಸುದ್ದಿಗಳು ಹರಿದಾಡುತ್ತಿವೆ.
ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷ, ಪ್ರಭಾವಿ ಮುಖಂಡ ಹಾಗೂ ಅವರ ಪುತ್ರನನ್ನು ಪೊಲೀಸರು ಬಂಧಿಸಿದ್ದು, ಫಾ. ಮಹೇಶ್ ಅವರನ್ನು ಕೊಲೆ ಮಾಡಲಾಗಿದೆ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಅದರಲ್ಲೂ ವಾಟ್ಸಪ್ ನಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ. ಯಾರೋ ಒಬ್ಬ ವ್ಯಕ್ತಿ ಈ ವಿಚಾರವನ್ನು ಸುದ್ದಿಯ ಶೈಲಿಯಲ್ಲಿ ಬರೆದು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಮಾಡಿದ್ದಾನೆ. ಇದುವೇ ಸತ್ಯವೆಂದು ನಂಬಿಕೊಂಡಿರುವ ಜನ ಈ ಸುದ್ದಿಯನ್ನು ವೈರಲ್ ಮಾಡುತ್ತಿದ್ದಾರೆ. ವಿಷಾಧನೀಯ ವಿಚಾರವೆಂದರೆ, ಈ ಸುದ್ದಿಯ ಸತ್ಯಾಸತ್ಯತೆಗಳ ಬಗ್ಗೆ ತಿಳಿಯಲು ಯತ್ನಿಸದೆ ಶಿಕ್ಷಿತ ವರ್ಗವೇ ಪ್ರಮುಖವಾಗಿ ಈ ಸುದ್ದಿಯನ್ನು ವೈರಲ್ ಮಾಡುತ್ತಿದೆ. ಸದ್ಯ ಈ ವಿಚಾರ ಸಾಕಷ್ಟು ಪರ ವಿರೋಧ ಚರ್ಚೆಗೆ ಕಾರಣವಾಗಿದೆ.
ಸುದ್ದಿ ವೈರಲ್ ಆಗುತ್ತಿದ್ದಂತೆ ದಾಯ್ಜಿವಲ್ಡ್ ಮಂಗಳೂರು ಹಾಗೂ ಉಡುಪಿ ಕಚೇರಿಗೆ ನಿರಂತರ ಕರೆಗಳು ಬರಲಾರಂಭಿಸಿದ್ದು, ಸುದ್ದಿಯ ಬಗ್ಗೆ ಖಚಿತ ಪಡಿಸಿಕೊಳ್ಳಲು ಸಾರ್ವಜನಿಕರು ಯತ್ನಿಸುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಬಂಧನವಾಗಿರುವ ಕುರಿತು ಹಾಗೂ ಪ್ರಕರಣದ ಕುರಿತಂತೆ ಮಾಹಿತಿ ನೀಡಲು ಪೊಲೀಸರು ನಿರಾಕರಿಸಿದ್ದಾರೆ.
ಇನ್ನು ಸಾಮಾಜಿಕ ಜಾಲ ತಾಣಗಳ ಮೂಲಕ ನಕಲಿ ಸುದ್ದಿ ಪಸರಿಸಿ ಗ್ರಾಮ ಪಂಚಾಯತ್ ಅಧ್ಯಕ್ಷನ ಮಾನ ಹಾನಿಗೆ ಯತ್ನಿಸಲಾಗಿದ್ದು, ಈ ಬಗ್ಗೆ ಅವರು ಉಡುಪಿಯ ಸೈಬರ್ ಕ್ರೈಂ ಪೊಲೀಸರ ಮೊರೆ ಹೋಗಿದ್ದಾರೆ ಎಂದು ತಿಳಿದು ಬಂದಿದೆ.
ಈ ಹಿಂದೆ ಮೂವರು ಯುವಕರು ಫಾ. ಮಹೇಶ್ ಸಾವಿನ ಹಿಂದೆ ಭಾಗಿಯಾಗಿದ್ದರು ಎಂದು ವದಂತಿಗಳು ಹಬ್ಬಿದ್ದವು. ಆ ಸಂದರ್ಭದಲ್ಲಿ ದಾಯ್ಜಿವರ್ಲ್ಡ್ ಸಮರ್ಪಕ ಮಾಹಿತಿ ಸಂಗ್ರಹಿಸಿ ಸುಳ್ಳು ಸುದ್ದಿ ಎಂದು ತಿಳಿಸಿರುವುದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಅಲ್ಲದೆ, ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುವ ವದಂತಿಗಳಿಗೆ ಕಿವಿಗೊಡದಂತೆ ಮನವಿ ಮಾಡುತ್ತಿದ್ದೇವೆ.