ಉಡುಪಿ, ಅ 21 (Daijiworld News/MSP): ದೀಪಾವಳಿ ಅಂದ್ರೆ ಮೊದಲು ನೆನಪಾಗುವುದು ಮನೆ ಬೆಳಗುವ ಹಣತೆಗಳ ಸಾಲು, ಮನೆ ಮುಂದೆ ರಂಗು ರಂಗಿನ ಗೂಡುದೀಪ. ಇನ್ನೇನು ದೀಪಾವಳಿ ಹಬ್ಬ ಬಂದೇ ಬಿಡ್ತು. ಉಡುಪಿಯಲ್ಲಿ ದೀಪಾವಳಿಯ ಆಚರಿಸಲು ಸಿದ್ದತೆಯು ಭರ್ಜರಿಯಾಗಿ ನಡೆಯುತ್ತಿದೆ. ಈ ದೀಪಾವಳಿಯ ಮೆರುಗನ್ನು ಇನ್ನಷ್ಟು ಹೆಚ್ಚಿಸಲು ಅಂಗಡಿಯಲ್ಲಿ, ಮಾರ್ಕೆಟ್ ನಲ್ಲಿ ಬಣ್ಣ ಬಣ್ಣದ ವಿಶೇಷವಾದ ಗೂಡುದೀಪಗಳು ಈಗಾಗಲೇ ಲಗ್ಗೆ ಇಟ್ಟಿವೆ.
ಆದರೆ ಇತ್ತೀಚೆಗೆ ವರ್ಷದಿಂದ ವರ್ಷಕ್ಕೆ ಸಾಂಪ್ರದಾಯಿಕ ಮೂಲ ಸ್ವರೂಪವನ್ನೇ ಕಳೆದುಕೊಳ್ಳುತ್ತಿದೆ. ಆದರೆ ಮಲ್ಪೆಯ ಮೂಡುಬೆಟ್ಟಿನ ವನಿತೆಯರಿಂದ ಕೈಯಲ್ಲಿ ಅರಳುತ್ತಿದೆ ಸಾಂಪ್ರದಾಯಿಕ ಬಿದುರಿನ ಕಡ್ಡಿಯಿಂದ ಮಾಡುವ ಅಷ್ಷ ಪಟ್ಟಿ, ನಕ್ಷತ್ರ, ದಶ ಪಟ್ಟಿ, ಮಂಟಪ ಗೂಡುದೀಪಗಳು ತಯಾರಾಗುತ್ತಿವೆ. ಮೂಡುಬೆಟ್ಟುವಿನ ಆರು ಮಹಿಳಾ ಮಣಿಗಳು ಒಂದುಗೂಡಿ ಜನರು ಇಷ್ಟಪಡುವಂತೆ, ಸುಮಾರು ಐದು ವರ್ಷಗಳಿಂದ ಬಿದುರು ಕಡ್ಡಿ, ಬಣ್ಣದ ಪೇಪರ್, ನೂಲು, ಕಾಗದದ ಹೂವು, ಗಮ್ ಬಳಸಿ ಅಪ್ಪಟ ಸಾಂಪ್ರದಾಯಿಕವಾಗಿ ರಚಿಸುತ್ತಾರೆ. ಮಮತಾ ಅವರು ಉಳಿದವರಿಗೆ ಮಾರ್ಗದರ್ಶನ ನೀಡುತ್ತಾರೆ. ಇವರೊಂದಿಗೆ ಶಶಿಕಲಾ, ವೃಂದಾ, ಶ್ರೇಯಾ, ಗೀತಾ, ರಂಜಿತಾ, ಅವರೂ ಕೈ ಜೋಡಿಸುತ್ತಾರೆ.
ಸುಮಾರು ಆರು ತಿಂಗಳಿಂದ ಬಿದುರಿನ ಕಡ್ಡಿಗಳನ್ನು ಜೋಡಿಸಿ, ಸರಿಯಾದ ಗಾತ್ರದ ಕಡ್ಡಿಗಳನ್ನು ಕತ್ತರಿಸಿ, ನೂಲಿನಿಂದ ಕಟ್ಟಿ ಗೂಡುದೀಪದ ಅಟ್ಟೆ (basic structure) ಮಾಡುವ ಕೆಲಸವನ್ನು ಪ್ರಾರಂಭಿಸುತ್ತಾರೆ. ದೀಪಾವಳಿ ಹತ್ತಿರವಾಗುತ್ತಿದ್ದಂತೆ, ಎರಡು ತಿಂಗಳುಗಳಿಂದ ಕಾಗದದ ಹೂವುಗಳಿಂದ ಅಟ್ಟೆಗೆ ಅಲಂಕಾರ ಮಾಡುವ ಕಾರ್ಯದಲ್ಲಿ ತೊಡಗಿಸಿಕೊಳ್ಳುತಾರೆ. ಸುಮಾರು ನೂರರಿಂದ ನೂರೈವತ್ತು ಗೂಡುದೀಪಗಳು ಇವರ ಕೈಚಳಕದಿಂದ ಮೂಡಿಬರುತ್ತಿವೆ.
ಸನ್ ಪ್ಯಾಕ್ ಗ್ಲಾಸ್ ಶೀಟ್ ಗೂಡುದೀಪ ವಿಶೇಷ
ಕರಾವಳಿಯಲ್ಲಿ ಇನ್ನೊಂದು ವಿಶೇಷವಾದ ಗೂಡುದೀಪವೆಂದರೆ ಅದು ಸನ್ ಗ್ಲಾಸ್ ಶೀಟ್ ನಿಂದ ತಯಾರಿಸಲ್ಪಡುವ ಈ ಗೂಡುದೀಪ. ಇದರೊಳಗೆ ಹಾಕುವ ಬೆಳಕು ಎಲ್ಲೆಡೆ ಪಸರಿಸಿ ಎಲ್ಲರನ್ನೂ ಆಕರ್ಷಿಸುತ್ತವೆ. ಆದ್ದರಿಂದ ಇದಕ್ಕೇ ಬೇಡಿಕೆ ಹೆಚ್ಚು. ಈಗಾಗಲೇ ೩೦ ಹೆಚ್ಚು ಪೀಸ್ ಗಳು ಮಾರಾಟ ವಾಗಿವೆಯಂತೆ. ಆಧುನಿಕ ಶೈಲಿಯಲ್ಲಿ ವಿನೂತನ ವಿನ್ಯಾಸದ ಕಲಾತ್ಮಕ ವನ್ನು ಬೇಡಿಕೆಯ ಮೇರೆಗೆ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಾರೆ.
ಹಿಂದೆಲ್ಲ ಪ್ರತಿಮನೆಯಲ್ಲೂ ಮನೆಯವರೇ ಒಟ್ಟುಗೂಡಿ ಸಂಭ್ರಮದಿಂದ ಗೂಡುದೀಪವನ್ನು ರಚಿಸುತ್ತಿದ್ದರು. ಆದರೆ ಕಾಲ ಬದಲಾಗುತ್ತಿದ್ದಂತೆ ಸಮಯದ ಅಭಾವ, ತಾಳ್ಮೆ, ಸಾಂಪ್ರದಾಯಿಕತೆ ತೆರೆಮರೆಗೆ ಸಾಗುತ್ತಿದೆ. ರೆಡಿಮೇಡ್ ಪ್ಲಾಸ್ಟಿಕ್, ಬಟ್ಟೆಯ ಗೂಡುದೀಪಗಳು ಆ ಜಾಗವನ್ನು ಆಕ್ರಮಿಸಿಕೊಂಡಿದೆ. ಹಾಗಾಗಿ ಅಂಗಡಿಯಲ್ಲಿ ಮಾರುವ ಬಣ್ಣದ ಪ್ಲಾಸ್ಟಿಕ್ ಗೂಡುದೀಪಗಳಿಗೆ ಮೊರೆಹೋಗುತ್ತಾರೆ. ಆದರೆ ಹಾಗಾಗಬಾರದು, ಜನರು ಮತ್ತೆ ಸಾಂಪ್ರದಾಯಿಕ ಗೂಡುದೀಪಗಳ ಪ್ರಾಮುಖ್ಯತೆ ಯನ್ನು ಅರಿತುಕೊಳ್ಲಬೇಕು. ಹಾಗಾಗಿ ನಾವು ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇವೆ ಎನ್ನತ್ತಾರೆ ಕಲಾವಿದೆ ಮೂಡುಬೆಟ್ಟುವಿನ ಮಮತಾ. ಇದರಿಂದ ನಮಗೂ ಮನಸ್ಸಿಗೆ ಮುದ ನೀಡುತ್ತದೆ.
ಈ ವನಿತೆಯವರು ಕೇವಲ ಪೇಪರ್ ವರ್ಕ್ ಅಲ್ಲದೆ, ಮಮತಾ ಮತ್ತು ಗೀತಾ ಇಬ್ಬರು ಕಳೆದ ಆರು ವರ್ಷಗಳಿಂದ ಮರದ ಕೆತ್ತನೆಯನ್ನು ಸುಂದರವಾಗಿ ಯಾರಿಗೂ ಕಮ್ಮಿಯಿಲ್ಲದಂತೆ ಡಿಸೈನ್ ಮಾಡುತ್ತಾರೆ. ಇವರಿಬ್ಬರ ಕೈ ಚಳಕದಿಂದ ವಾಲ್ ಷೋ ಫಿಸಸ್, ಗಿಫ್ಟ್ ಮಾಡುವ ಸುಂದರ ವಸ್ತುಗಳು, ಆನೆ, ದೇವರ ಮೂರ್ತಿಗಳು, ಬಳ್ಳಿಗಳಿರುವ ವಿನ್ಯಾಸ ಮಾಡುತ್ತಾರೆ. ಹಾಗೆಯೇ ಇವರ ಕೈಚಳಕದಿಂದ ಮೂಡುವ ಕುಸುರಿ ಕೆಲಸದ ವಸ್ತುಗಳಿಗೆ ಬೇಡಿಕೆಯು ಚೆನ್ನಾಗಿದೆ.