ಮಂಗಳೂರು, ಅ.21(Daijiworld News/SS): ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಉತ್ತರ ಕನ್ನಡದಲ್ಲಿ ಹಾಗೂ ಬೆಳಗಾವಿಯಲ್ಲಿ 24 ಮತ್ತು 25ರಂದು ಭಾರೀ ಮಳೆಯ ನಿರೀಕ್ಷೆ ಇದೆ. ಈ ಹಿನ್ನಲೆಯಲ್ಲಿ, ಜಿಲ್ಲೆಗಳಲ್ಲಿ ಕಿತ್ತಳೆ ಬಣ್ಣದ ಮುನ್ನೆಚ್ಚರಿಕೆ ನೀಡಲಾಗಿದೆ.
ಒಂದೇ ದಿನದಲ್ಲಿ 115.6ರಿಂದ 204.4 ಮಿ.ಮೀ.ಮಳೆಯಾಗುವ ಸಂಭವ ಇರುವ ಪ್ರದೇಶದಲ್ಲಿ ಈ ಎಚ್ಚರಿಕೆ ನೀಡಲಾಗಿದೆ. ರಾಜ್ಯದ ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ 21ರಿಂದ 23ರವರೆಗೆ ಬಹುತೇಕ ಎಲ್ಲ ಜಿಲ್ಲೆಗಳ ಆಯ್ದ ಪ್ರದೇಶಗಳಲ್ಲಿ ಗುಡುಗು ಸಹಿತ ಭಾರಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಆಂಧ್ರಪ್ರದೇಶ ಮತ್ತು ತಮಿಳುನಾಡು ಕರಾವಳಿಯಲ್ಲಿ ವಾಯುಭಾರ ಕುಸಿತ, ಮಹಾರಾಷ್ಟ್ರದ ವಿದರ್ಭ ಮತ್ತು ಕರ್ನಾಟಕದ ಉತ್ತರ ಒಳನಾಡು ಮಧ್ಯೆ ಕಡಿಮೆ ಒತ್ತಡದ ತಗ್ಗುಗಳು ಉಂಟಾಗಿರುವುದು ಹಾಗೂ ಈಶಾನ್ಯ ಮಾರುತಗಳ ಪ್ರವೇಶದಿಂದ ರಾಜ್ಯದಲ್ಲಿ ಮಳೆಯಾಗುತ್ತಿದೆ.
ಹಿಂಗಾರು ಮಾರುತಗಳ ಭರ್ಜರಿ ಪ್ರವೇಶದಿಂದ ಕಳೆದೆರಡು ದಿನಗಳಿಂದ ರಾಜ್ಯಾದ್ಯಂತ ಮಳೆ ಅಬ್ಬರಿಸುತ್ತಿದೆ. ಇನ್ನೂ 3-4 ದಿನಗಳು ಇದೇ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ. ಮಾತ್ರವಲ್ಲ, ಮುಂದಿನ ಮೂರು ದಿನಗಳು ಮಳೆ ಅಬ್ಬರ ಮತ್ತಷ್ಟು ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆಯ ಪ್ರಾದೇಶಿಕ ಕಚೇರಿ ತಿಳಿಸಿದೆ.