ಮಂಗಳೂರು, ಜ 6: ನಗರದ ಕೊಟ್ಟಾರ ಚೌಕಿಯಲ್ಲಿ ಜನವರಿ 3 ರಂದು ರಾತ್ರಿ ಬಶೀರ್ ಹತ್ಯೆಗೆ ಯತ್ನಿಸಿದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಮಂಗಳೂರು ನಗರದ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೇರಳದ ಕಾಸರಗೋಡಿನ ಶ್ರೀಜಿತ್ ಪಿ.ಕೆ (25), ಸಂದೇಶ್ ಕೋಟ್ಯಾನ್ (22), ಪಡೀಲ್ ಸಮೀಪದ ಕಿಶನ್ ಪೂಜಾರಿ (21), ಧನುಷ್ ಪೂಜಾರಿ (22) ಬಂಧಿತ ಆರೋಪಿಗಳು.
7 ಜನರ ತಂಡದಿಂದ ಬಷೀರ್ ಮೇಲೆ ಹಲ್ಲೆ ನಡೆದಿತ್ತು. ಇದೀಗ ಪೊಲೀಸರು ನಾಲ್ವರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಪೊಲೀಸರ ವಶದಲ್ಲಿರುವ ನಾಲ್ವರು ಆರೋಪಿಗಳು, ಈ ಹಿಂದೆ ಕ್ರಿಮಿನಲ್ ಕೃತ್ಯಗಳಲ್ಲಿ ಭಾಗಿಯಾಗಿದ್ದವರು ಎಂದು ತಿಳಿದುಬಂದಿದೆ.
ಶ್ರೀಜಿತ್ ವಿರುದ್ಧ ಕಾಸರಗೋಡು ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ 6 ಪ್ರಕರಣಗಳು, ಉಳ್ಳಾಲ ವ್ಯಾಪ್ತಿಯಲ್ಲಿ 1 ಪ್ರಕರಣ, ಕಿಶನ್ ಪೂಜಾರಿ ವಿರುದ್ಧ 3 ಪ್ರಕರಣಗಳು, ಧನುಷ್ ಪೂಜಾರಿ ವಿರುದ್ಧ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಹಲ್ಲೆ ಮತ್ತು ದೊಂಬಿ ಪ್ರಕರಣ, ಸಂದೇಶ್ ವಿರುದ್ದ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ ದಾಖಲಾಗಿತ್ತು.
ಸುರತ್ಕಲ್ ಕಾಟಿಪಳ್ಳದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತ ದೀಪಕ್ ರಾವ್ ಹತ್ಯೆಗೆ ಪ್ರತಿಕಾರವಾಗಿ ಬಶೀರ್ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರು. ಬಶೀರ್ ಫಾಸ್ಟ್ ಪುಡ್ ಅಂಗಡಿ ನಡೆಸುತ್ತಿದ್ದು, ಅಂಗಡಿ ಮುಚ್ಚಿ ಮನೆಗೆ ಹೋಗುವ ಸಂದರ್ಭ ಈ ಹಲ್ಲೆ ನಡೆದಿತ್ತು. ಇದೀಗ ಖಾಸಗಿ ಆಸ್ಪತ್ರೆಯಲ್ಲಿ ಬಶೀರ್ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.