ಕಾಸರಗೋಡು, ಅ 20 (Daijiworld News/MSP): ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸೋಮವಾರ ನಡೆಯಲಿದ್ದು, 2,14, 779 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಮತದಾನಕ್ಕಾಗಿ 198 ಮತಗಟ್ಟೆಗಳನ್ನು ಸಜ್ಜುಗೊಳಿಸಲಾಗಿದೆ. ಪೈವಳಿಕೆ ನಗರ ಸರಕಾರಿ ಶಾಲೆಯಿಂದ ಇಂದು ಬೆಳಿಗ್ಗೆ ಮತಗಟ್ಟೆಗಳಿಗೆ ಸಾಮಗ್ರಿಗಳನ್ನು ಕೊಂಡೊಯ್ಯಲಾಯಿತು.ನಾಳೆ ಬೆಳಿಗ್ಗೆ ಏಳರಿಂದ ಸಂಜೆ ಆರು ಗಂಟೆ ತನಕ ಮತದಾನ ನಡೆಯಲಿದೆ.
ಇವರಲ್ಲಿ 1,06,928 ಮಹಿಳೆಯರು, 1,07,851 ಮಂದಿ ಪುರುಷರು, 1240 ವಿಶೇಷಚೇತನರು ಇದ್ದಾರೆ. ಚುನಾವಣೆಯ ವೇಳೆ 20 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ನಡೆಯಲಿದೆ. 49 ಮತಗಟ್ಟೆಗಳಲ್ಲಿ ಅರೆಸೇನಾ ಪಡೆ ಯನ್ನು ನಿಯೋಜಿಸಲಾಗಿದೆ. 257 ಮತಯಂತ್ರಗಳನ್ನು ಸಜ್ಜುಗೊಳಿಸಲಾಗಿದೆ. ಸೂಕ್ಷ್ಮ ಮತಗಟ್ಟೆಗಳಲ್ಲಿ ಪೊಲೀಸ್ ನಿಗಾ ಇರಿಸಿದ್ದಾರೆ. 105 ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ.ಎಲ್ಲಾ ಮತಗಟ್ಟೆಗಳಲ್ಲಿ ವೀಡೀಯೋ ಚಿತ್ರೀಕರಣ ನಡೆಯಲಿದೆ. 53ರಲ್ಲಿ ಮೈಕ್ರೋ ನಿರೀಕ್ಷಕರು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಪರ್ಧಾಧಾರಿಗಳ ಗುರುತಿಗೆ 198 ಮಹಿಳಾ ಪೋಲಿಂಗ್ ಸಹಾಯಕರನ್ನು ನೇಮಿಸಲಾಗಿದೆ.
ಶಾಂತಿಯುತ ಹಾಗೂ ಪಾರದರ್ಶಕ ಮತದಾನಕ್ಕಾಗಿ ಆಯೋಗ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. 2016ರಲ್ಲಿ 76.33 ಶೇಕಡಾ ಮತದಾನವಾಗಿತ್ತು. ಉಪಚುನಾವಣೆಯಾದುದರಿಂದ ಮತದಾನ ಶೇಕಡಾವಾರು ಹೆಚ್ಚಳವಾಗುವ ಸಾಧ್ಯತೆ ಇದೆ. ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟವಾದ ಯು ಡಿ ಎಫ್ ನಿಂದ ಎಂ.ಸಿ ಖಮರುದ್ದೀನ್, ಸಿಪಿಐಎಂ ನೇತೃತ್ವದ ಎಲ್ ಡಿ ಎಫ್ ನಿಂದ ಎಂ.ಶಂಕರ ರೈ, ಬಿಜೆಪಿಯಿಂದ ಕುಂಟಾರು ರವೀಶ ತಂತ್ರಿ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳಾಗಿದ್ದು, ಪಕ್ಷೇತರರು ಸೇರಿದಂತೆ ಏಳು ಮಂದಿ ಕಣದಲ್ಲಿದ್ದಾರೆ.
ಎಲ್ ಡಿ ಎಫ್ ಅಭ್ಯರ್ಥಿ ಎಂ .ಶಂಕರ ರೈ ಮಾಸ್ಟರ್ ನಾಳೆ ಬೆಳಿಗ್ಗೆ ಅಂಗಡಿಮೊಗರು ಸರಕಾರಿ ಶಾಲೆಯ 165ನೇ ಮತಗಟ್ಟೆಯಲ್ಲಿ ಮತಚಲಾಯಿಸುವರು. ಖಮರುದ್ದೀನ್ ಮತ್ತು ರವೀಶ ತಂತ್ರಿ ಈ ಕ್ಷೇತ್ರದ ನಿವಾಸಿಗಳಲ್ಲ. ಆದುದರಿಂದ ಇಬ್ಬರಿಗೂ ಇಲ್ಲಿ ಮತದಾನ ಇಲ್ಲ. ಕ್ಷೇತ್ರದ ಲ್ಲಿ 93 ನೇ ಇಚ್ಲಂಗೋಡು ಎಎಲ್ ಪಿ ಶಾಲಾ ಮತಗಟ್ಟೆಯಲ್ಲಿ ಗರಿಷ್ಟ 1463 ಮತದಾರರನ್ನು ಹೊಂದಿದ್ದರೆ ಪೆರ್ಲ ಸ್ವರ್ಗದ ಸ್ವಾಮಿ ವಿವೇಕಾನಂದ ಯು ಪಿ ಶಾಲೆಯ 194 ನೇ ಮತಗಟ್ಟೆಯಲ್ಲಿ 628 ಮತದಾರರಿದ್ದಾರೆ.