ಬೆಳ್ತಂಗಡಿ, ಅ 20 (Daijiworld News/MSP): ಕುಖ್ಯಾತ ಮರ ಕಳ್ಳರ ತಂಡವೊಂದರ ಮೂವರು ಆರೋಪಿಗಳನ್ನು ಬಂಧಿಸಿರುವ ಬೆಳ್ತಂಗಡಿ ಅರಣ್ಯ ಇಲಾಖೆಯವರು ಅವರಿಂದ ಸುಮಾರು ಮೂರು ಲಕ್ಷ ಬೆಲೆಬಾಳುವ ಮರ ಹಾಗೂ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳು ಕೋಟೆಕಾರು ನಿವಾಸಿ ಅಬ್ಬಾಸ್(46) ಈತ ಕುಖ್ಯಾತ ಮರಗಳ್ಳನಾಗಿದ್ದು ವರ್ಷದ ಹಿಂದೆಯೂ ಈತ ಬೆಳ್ತಂಗಡಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದ, ಈತನೊಂದಿಗಿದ್ದ ಕಕ್ಕಿಂಜೆ ಗಾಂಧೀನಗರ ನಿವಾಸಿ ಮಹಮ್ಮದ್ ಸೂಫಿ (34) ಹಾಗೂ ಗುಂಡ್ಯ ನಿವಾಸಿ ಸುರೇಶ(36) ಎಂಬವರಾಗಿದ್ದಾರೆ. ಇವರೊಂದಿಗಿದ್ದ ಕೌಕ್ರಾಡಿ ಹೊಸಮಜಲು ನಿವಾಸಿ ಮಹಮ್ಮದ್ ಬಾವ ಎಂಬಾತ ದಾಳಿಯ ವೇಳೆ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.
ಆರೋಪಿಗಳು ಅರಣ್ಯದಿಂದ ಬೀಟೆ ಹಾಗೂ ಸಾಗುವಾನಿ ಮರಗಳನ್ನು ಕಡಿದು ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಬೆಳ್ತಂಗಡಿ ಅರಣ್ಯ ಇಲಾಖೆಯವರು ಶನಿವಾರ ಬೆಳಗ್ಗಿನ ಜಾವ ಧರ್ಮಸ್ಥಳ ಸಮೀಪ ಪುದುವೆಟ್ಟು ಕ್ರಾಸ್ ನಲ್ಲಿ ಕಾದು ಕುಳಿತು ಆರೋಪಿಗಳನ್ನು ಬಂದಿಸಿದ್ದಾರೆ. ಆರೋಪಿಗಳು ಟಾಟಾ ಸಿಯಾರೋ ಕಾರಿನಲ್ಲಿ ಮರವನ್ನು ಸಾಗಾಟ ಮಾಡುತ್ತಿದ್ದರು. ವಾಹನವನ್ನು ವಶಕ್ಕೆ ಪಡಯಲಾಗಿದ್ದು ಇವರಿಂದ ೫ ಸಾಗುವಾನಿ ಮರದ ತುಂಡುಗಳನ್ನು, ಐದು ಬೀಟೆ ಮರದ ತುಂಡುಗಳ ಎರಡು ಗರಗಸಗಳು, ಕತ್ತಿ ಹಾಗೂ ಹಗ್ಗವನ್ನು ಹಾಗೂ ಇವರು ಉಪಯೋಗಿಸಿದ ಒಂದು ಬೈಕ್ ಅನ್ನೂ ವಶಕ್ಕೆ ಪಡೆಯಲಾಗಿದೆ. ವಶಪಡಿಸಿಕೊಂಡ ವಸ್ತುಗಳ ಮೌಲ್ಯ ಎರಡು ಲಕ್ಷ ರೂ ಎಂದು ಅಂದಾಜಿಸಲಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ಹೆಚ್ಚಿನ ವಿಚಾರಣೆಗಾಗಿ ಇಲಾಖೆಯವರು ವಶಕ್ಕೆ ಪಡೆದಿದ್ದಾರೆ. ಈ ತಂಡ ಕುಖ್ಯಾತ ಅರಣ್ಯ ಚೋರರ ತಂಡವಾಗಿದ್ದು ಇವರ ವಿರುದ್ದ ಈಗಾಗಲೇ ಇಲಾಖೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ ಈ ಬಗ್ಗೆಯೂ ವಿಚಾರಣೆ ನಡೆಯುತ್ತಿದೆ.
ಡಿಸಿಎಫ್ ಡಾ.ಕರಿಕಲನ್ ಹಾಗೂ ಎಸಿಎಫ್ ಶಂಕರೇಗೌಡ ಅವರ ಮಾರ್ಗದರ್ಶನದಲ್ಲಿ ವಲಯರಣ್ಯಾಧಿಕಾರಿ ಸುಬ್ಬಯ್ಯ ನಾಯ್ಕ ನೇತೃತ್ವದಲ್ಲಿ ಉಪ ವಲಯರಣ್ಯಾಧಿಕಾರಿಗಳಾದ ಯತೀಂದ್ರ, ರವೀಂದ್ರ, ಹರಿಪ್ರಸಾದ್, ಉಲ್ಲಾಸ್ ಕೆ, ರಾಘವೇಂದ್ರ, ಅರಣ್ಯ ರಕ್ಷಕರಾದ ರಾಘವೇಂದ್ರ ಪ್ರಸಾದ್, ಶರತ್ ಶೆಟ್ಟಿ, ರಾಜೇಶ್ ಗಾಡಿಗ, ಪಾಂಡುರಂಗ ಹಾಗೂ ಇತರರು ಭಾಗವಹಿಸಿದ್ದರು.