ಉಡುಪಿ, ಅ 19 (DaijiworldNews/SM): ಭಾರೀ ಮಳೆಯಿಂದ ಗುಡ್ಡ ಕುಸಿದು ಸಂಚಾರ ಬಂದ್ ಆಗಿದ್ದ ಆಗುಂಬೆ ಘಾಟ್ ನಲ್ಲಿ ದುರಸ್ಥಿ ಕಾರ್ಯ ಮುಗಿದಿದ್ದು, ವಾಹನ ಸಂಚಾರಕ್ಕೆ ಮುಕ್ತಗೊಂಡಿದೆ.
ರಾಷ್ಟ್ರೀಯ ಹೆದ್ದಾರಿ 169ಎ ರ ಆಗುಂಬೆ ಘಾಟಿಯಲ್ಲಿ ಅತಿಯಾಗಿ ಮಳೆ ಬಂದು ಕೆಲವು ತಿರುವುಗಳಲ್ಲಿ ಗುಡ್ಡ ಕುಸಿದಿತ್ತು. ಪರಿಣಾಮ ದುರಸ್ತಿಗಾಗಿ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿತ್ತು. ಹಾಗೂ ಬಳಿಕ ದುರಸ್ತಿ ಕಾರ್ಯ ಮುಗಿದ ನಂತರ ಸಾರ್ವಜನಿಕ ಹಿತ ದೃಷ್ಟಿಯಿಂದ ಸುಗಮ ಸಂಚಾರಕ್ಕಾಗಿ ಲಘು ವಾಹನಗಳಾದ ಮಿನಿ ಬಸ್ಗಳು, ಜೀಪು, ವ್ಯಾನ್, ಕಾರುಗಳು ಮತ್ತು ದ್ವಿಚಕ್ರ ವಾಹನಗಳೊಂದಿಗೆ ಎಲ್.ಸಿ.ವಿ. ವಾಹನಗಳ ಸಂಚಾರಕ್ಕೆ ಮಾತ್ರ ಮುಕ್ತಗೊಳಿಸಿ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಿ ಆದೇಶಿಸಲಾಗಿತ್ತು.
ಇದೀಗ ಈ ರಸ್ತೆಯಲ್ಲಿ ಪರಿಸ್ಥಿತಿ ಸುಧಾರಿಸಿದೆ. ಗುಡ್ಡ ಕುಸಿತ, ಮರಗಳು ಉರುಳುವ ಸಂಭವ ಕಡಿಮೆಯಾಗಿರುವ ಕಾರಣ ರಾಷ್ಟ್ರೀಯ ಹೆದ್ದಾರಿ 169 ಎ ರ ಆಗುಂಬೆ ಘಾಟಿಯಲ್ಲಿ ಲಘು ವಾಹನಗಳು ಹಾಗೂ ಭಾರಿ ವಾಹನಗಳ ಸಂಚಾರಕ್ಕೆ ಮತ್ತೆ ಅವಕಾಶ ಕಲ್ಪಿಸಲಾಗಿದ್ದು, ಈ ಬಗ್ಗೆ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಆದೇಶ ಹೊರಡಿಸಿದ್ದಾರೆ.
ಇನ್ನು ಕಳೆದ ಮಾರ್ಚ್ 30 ರಂದು ವಾಹನಗಳ ಸಂಚಾರವನ್ನು ಬಂದ್ ಮಾಡಿ ಆದೇಶ ಹೊರಡಿಸಲಾಗಿತ್ತು.