ಕಾಸರಗೋಡು, ಅ 19 (Daijiworld News/MSP): ಪ್ರತಿಷ್ಠೆಯ ಕಣವಾಗಿರುವ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಹಿರಂಗ ಪ್ರಚಾರ ಶನಿವಾರ ಸಂಜೆ ಅಂತ್ಯಗೊಳ್ಳಲಿದೆ. ಸಂಜೆ ಆರು ಗಂಟೆಗೆ ಬಹಿರಂಗ ಪ್ರಚಾರ ಕೊನೆಗೊಳ್ಳಲಿದ್ದು , ಸೋಮವಾರ ಉಪಚುನಾವಣೆ ನಡೆಯಲಿದೆ. ತ್ರಿಕೋನ ಸ್ಪರ್ಧೆಯ ಮೂಲಕ ಗಮನ ಸೆಳೆಯುತ್ತಿರುವ ಮಂಜೇಶ್ವರದಲ್ಲಿ ಈ ಬಾರೀ ಗೆಲ್ಲಲೇ ಬೇಕೆಂಬ ಹೋರಾಟವನ್ನು ಮೂರು ಪಕ್ಷಗಳು ಹೊಂದಿದೆ.
ಹಿಂದೆಂದೂ ಕಾಣದ ಪ್ರಚಾರಕ್ಕೆ ಈ ಬಾರೀ ಮಂಜೇಶ್ವರ ಉಪಚುನಾವಣೆ ಸಾಕ್ಷಿಯಾಗಿದೆ. ಮಂಜೇಶ್ವರ ಕ್ಷೇತ್ರ ರಚನೆಯಾದ ಬಳಿಕ ಇದುವರೆಗೂ ಕಾಣದ ಪ್ರಚಾರ ಭರಾಟೆಗೆ ಉಪಚುನಾವಣೆ ಸಾಕ್ಷಿಯಾಗುವಂತಾಗಿದೆ . ಘಟಾನುಘಟಿ ನಾಯಕರುಗಳನ್ನು ಪ್ರಚಾರಕ್ಕಿಳಿಸಿ ಪ್ರಮುಖ ಪಕ್ಷಗಳು ಮತದಾರರನ್ನು ಸೆಳೆಯಲು ಕಸರತ್ತು ನಡೆಸಿವೆ.
ಇನ್ನೊಂದೆಡೆ ಕೇರಳದ ಉಪ ಚುನಾವಣೆ ನಡೆಯುವ ಐದು ಮಂಡಳಗಳಲ್ಲಿ ಅಕ್ಟೋಬರ್ 21 ಸೋಮವಾರ ಎಲ್ಲಾ ಖಾಸಗಿ ಹಾಗೂ ಸರಕಾರಿ ಸಂಸ್ಥೆಗಳಿಗೆ ಸಾರ್ವಜನಿಕ ರಜಾದಿನವಾಗಿ ಸರ್ಕಾರ ಘೋಷಿಸಿದೆ.
ವಟ್ಟಿಯೂರುಕಾವು, ಕೋಣಿ, ಅರೂರು, ಎರ್ನಾಕುಲಂ ಎಂಬೀ ವಿಧಾನಸಭಾ ಕ್ಷೇತ್ರದ ಶಾಸಕರು ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಸಂಸದರಾದ ಕಾರಣ ಈ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯುತ್ತಿದೆ.ಮಂಜೇಶ್ವರ ದಲ್ಲಿ ಮಾತ್ರ ಶಾಸಕರು ನಿಧನರಾದರಿಂದ ತೆರವಾದ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದೆ.