ಮಂಗಳೂರು, ಅ 19 (Daijiworld News/MSP): ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಯ ಅಧಿಕಾರಿಗಳೆಂದು ಬಿಂಬಿಸಿಕೊಂಡು ದರೋಡೆಗೆ ಸಂಚು ರೂಪಿಸಿದ್ದ ಆರೋಪಿಗಳ ವಿರುದ್ದ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.
ಅಂತರರಾಜ್ಯ ವಂಚಕ ಸ್ಯಾಮ್ ಪೀಟರ್, ಕಾಶಿಮಠದ ಮಾಜಿ ಸ್ವಾಮೀಜಿ ರಾಘವೇಂದ್ರ ತೀರ್ಥ ಅಲಿಯಾಸ್ ಶಿವಾನಂದ ಪೈ ಸೇರಿದಂತೆ 15 ಮಂದಿ ವಿರುದ್ಧ ಮಂಗಳೂರು ಪೂರ್ವ (ಕದ್ರಿ) ಠಾಣೆ ಪೊಲೀಸರು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದಾರೆ.
ಕೇರಳದ ಕೋಯಿಲಾಡ್ ಕಾವನಡದವನಾಗಿದ್ದು, ಪ್ರಸ್ತುತ ಮಣಿಪಾಲದ ನಿವಾಸಿಯಾಗಿದ್ದ ಟಿ. ಸ್ಯಾಮ್ ಪೀಟರ್ (53), ಮೂಲತಃ ಮಡಿಕೇರಿ ಸಿದ್ಧಾಪುರ ಅರೇಕಳದವನಾಗಿದ್ದು, ಪ್ರಸ್ತುತ ಬೆಂಗಳೂರು ಯಲಹಂಕ ನೆಹರೂ ನಗರ ನಿವಾಸಿಯಾಗಿರುವ ಟಿ.ಕೆ. ಬೋಪಣ್ಣ (33), ಬೆಂಗಳೂರು ದಕ್ಷಿಣದ ನೀಲಸಂದ್ರ ನಿವಾಸಿ ಮದನ್ (41), ವೀರಾಜಪೇಟೆ ಕಾಕೂಟುಪುರಂ ನಾಲ್ಕೇರಿ ನಿವಾಸಿ ಚಿನ್ನಪ್ಪ (38), ಬೆಂಗಳೂರು ಕನಕಪುರ ಪಿಳ್ಳಿಕಾಮ ನಿವಾಸಿ ಸುನಿಲ್ರಾಜು (35), ಬೆಂಗಳೂರು ಗೌಡನಪಾಳ್ಯ ನಿವಾಸಿ ಕೋದಂಡರಾಮ (39), ಮಂಗಳೂರಿನ ಕೂಳೂರು ನಿವಾಸಿ ಮೊಯಿದ್ದೀನ್ ಅಲಿಯಾಸ್ ಚೆರಿಯನ್ (70), ಮಂಗಳೂರಿನ ಫಳ್ನೀರ್ ನಿವಾಸಿ ಎಸ್.ಎ.ಕೆ. ಅಬ್ದುಲ್ ಲತೀಫ್ (59) ಸೇರಿದಂತೆ 12 ಮಂದಿಯನ್ನು ಬಂಧಿಸಲಾಗಿದೆ. ಇನ್ನು ಮೂವರ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ.
ಆರೋಪಿಗಳಿಂದ ಎರಡು ಕಾರು, ಒಂದು ಪಿಸ್ತೂಲ್, 2 ರಿವಾಲ್ವರ್, 8 ಜೀವಂತ ಗುಂಡು, ವಾಯ್ಸ್ ರೆಕಾರ್ಡರ್, ಲ್ಯಾಪ್ ಟಾಪ್ ಸಹಿತ 20 ಲಕ್ಷ ರೂ. ಮೌಲ್ಯದ್ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಆರೋಪಿಗಳ ತಂಡ ಗೌಡ ಸಾರಸ್ವತ ಸಮಾಜದ ಪ್ರತಿಷ್ಠಿತ ವ್ಯಕ್ತಿಗಳ ಹತ್ಯೆಗೆ ಅಥವಾ ಅಪಹರಣಕ್ಕೆ ಸಂಚು ರೂಪಿಸಿತ್ತು ಎಂಬ ಮಾಹಿತಿಗಳನ್ನು ಆಧರಿಸಿ ಪೋಲಿಸರು ತನಿಖೆ ನಡೆಸಿ, ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ. 700 ಪುಟಗಳ ಆರೋಪಪಟ್ಟಿಯಲ್ಲಿ 78 ಸಾಕ್ಷಿಗಳ ಹೇಳಿಕೆಯನ್ನು ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಜಿಎಸ್ಬಿ ಸಮಾಜದ ಇಬ್ಬರು ಸ್ವಾಮೀಜಿಗಳ ನಡುವೆ ತಲೆದೋರಿರುವ ವಿವಾದವನ್ನು ಬಗೆಹರಿಸಿ ಕೊಡಲು ಮುಖ್ಯ ಆರೋಪಿ ಸ್ಯಾಮ್ ಪೀಟರ್ ಸಂಚು ರೂಪಿಸಿದ್ದ ಎಂಬುದು ಪೋಲೀಸ್ ತನಿಖೆಯ ವೇಳೆ ಬೆಳಕಿಗೆ ಬಂದಿತ್ತು.
ಉಡುಪಿಯ ಕಲ್ಪನಾ ರೆಸಿಡೆನ್ಸಿ ಮಾಲಕ ರಾಮಚಂದ್ರ ನಾಯಕ್ ಅವರ ಮೂಲಕ ಜಿಎಸ್ಬಿ ಸಮಾಜದ ಪರಿತ್ಯಕ್ತ ಸ್ವಾಮೀಜಿಯನ್ನು ಸಂಪರ್ಕಿಸಿದ್ದ ಸ್ಯಾಮ್ ಪೀಟರ್ ಮಠದ ಆಸ್ತಿ ವಿವಾದವನ್ನು ಬಗೆಹರಿಸಿಕೊಡಲು ರೂ. 15 ಲಕ್ಷ ಮುಂಗಡ ಪಡೆದಿದ್ದ. ಆ ಬಳಿಕ ತಂಡದೊಂದಿಗೆ ಮಂಗಳೂರಿಗೆ ಬಂದಿದ್ದ. ಹೋಟೆಲ್ನಲ್ಲಿ ತಂಗಿದ್ದ ವೇಳೆ ಆತನನ್ನು ಬಂಧಿಸಲಾಗಿದೆ ಎಂದು ಸೋಮವಾರ ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಪೊಲೀಸರು ತಿಳಿಸಿದ್ದಾರೆ.