ಕಾಸರಗೋಡು, ಅ 18 (DaijiworldNews/SM): ಕೇರಳದ ಜನರು ಕೋಮುವಾದಿ ಪಕ್ಷಕ್ಕೆ ಅಧಿಕಾರ ನಡೆಸಲು ಅವಕಾಶ ಮಾಡಿಕೊಡದು. ಪ್ರಜ್ಞಾವಂತ ಮತದಾರರು ಬಿಜೆಪಿ ಯನ್ನು ತಿರಸ್ಕರಿಸಿ ಜಾತ್ಯಾತೀತತೆಯನ್ನು ಮೆರೆಯುತ್ತಿರುವುದು ಶ್ಲಾಘನೀಯ. ಮಂಜೇಶ್ವರ ವಿಧಾನಸಭಾ ಉಪಚುನಾವಣೆಯಲ್ಲಿ ಯು ಡಿ ಎಫ್ ನ್ನು ಸೋಲಿಸಲು ಯಾವುದೇ ಪಕ್ಷಕ್ಕೆ ಸಾಧ್ಯವಿಲ್ಲ ಎಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಅವರು ಅಕ್ಟೋಬರ್ 18ರ ಶುಕ್ರವಾರ ಸಂಜೆ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಪೆರ್ಲ, ಪೈವಳಿಕೆ, ವರ್ಕಾಡಿ ಮಜೀರ್ ಪಳ್ಳದಲ್ಲಿ ಯುಡಿಎಫ್ ಅಭ್ಯರ್ಥಿ ಎಂ.ಸಿ. ಖಮರುದ್ದೀನ್ ಪರ ಚುನಾವಣಾ ಪ್ರಚಾರ ಸಮಾವೇಶವನ್ನುದ್ದೇಶಿಸಿ ಮಾತನಾಡಿದರು. ಕೇರಳದ ಜನತೆ ಶಾಂತಿ, ನೆಮ್ಮದಿ, ಉತ್ತಮ ಬದುಕು ಬಯಸುವವರು. ವಿದ್ಯಾವಂತ ನಾಡಿನಲ್ಲಿ ಕೋಮುವಾದಿ ಬಿಜೆಪಿ ತಲೆ ಎತ್ತದಂತೆ ನೋಡಿಕೊಳ್ಳುತ್ತಿರುವ ಮತದಾರರು ಮುಂದಿನ ಉಪಚುನಾವಣೆಯಲ್ಲಿ ಯುಡಿಎಫ್ ನತ್ತ ಒಲವು ತೋರುತ್ತಿದ್ದಾರೆ ಎಂದರು.
ಕಮ್ಯುನಿಸ್ಟ್ ಪಕ್ಷ ಅಂತಿಮ ಹಂತದಲ್ಲಿದೆ. ಪಶ್ಚಿಮ ಬಂಗಾಲ, ತ್ರಿಪುರದಲ್ಲಿ ಪಕ್ಷವು ಸಂಪೂರ್ಣ ಕೊಚ್ಚಿಹೋಗಿದೆ. ಕೇರಳದಲ್ಲಿ ಮುಂದಿನ ದಿನಗಳಲ್ಲಿ ಕಮ್ಯುನಿಸ್ಟ್ ಪಕ್ಷ ಅಸ್ತಿತ್ವ ಕಳೆದುಕೊಳ್ಳಲಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕೇರಳದಲ್ಲಿ 20 ರಲ್ಲಿ 19 ಕ್ಷೇತ್ರವನ್ನು ಯು ಡಿ ಎಫ್ ಗೆಲ್ಲುವ ಮೂಲಕ ದೇಶಕ್ಕೆ ಸಂದೇಶ ನೀಡಿದೆ ಎಂದರು.
ಬಿಜೆಪಿ ಯನ್ನು ಜನತೆ ತಿರಸ್ಕರಿಸಿದ್ದಾರೆ. ಕೇರಳದಲ್ಲಿ ಬಿಜೆಪಿಗೆ ಶಕ್ತಿ ಇಲ್ಲ. ದಕ್ಷಿಣ ಭಾರತದಲ್ಲಿ ಕೇರಳ ಬಿಜೆಪಿಯನ್ನು ಬೆಳೆಯಲು ಬಿಟ್ಟಿಲ್ಲ. ಜನರ, ಧರ್ಮಗಳ ನಡುವೆ ಬಿರುಕು ಮೂಡಿಸಿ ಸಮಾಜದಲ್ಲಿ ಅಶಾಂತಿ ಸ್ರಷ್ಟಿಸಿ ಅಧಿಕಾರಕ್ಕೆ ಬರುವ ಪಕ್ಷವಾಗಿರುವ ಬಿಜೆಪಿ ಅನೇಕ ರಾಜ್ಯಗಳಲ್ಲಿ ರಾಕ್ಷಸ ಪ್ರವೃತ್ತಿ ತೋರಿಸುತ್ತಿದೆ. ಆದರೆ, ಕೇರಳ ರಾಜ್ಯದಲ್ಲಿ ಅದಕ್ಕೆ ಸಾಧ್ಯವಾಗಿಲ್ಲ. ಇದಕ್ಕೆ ಇಲ್ಲಿನ ಜನರ ಜಾತ್ಯಾತೀತ ಮನೋಭಾವ ಕಾರಣವಾಗಿದೆ. ಈ ದೇಶ ಒಂದು ಧರ್ಮದ ದೇಶವಲ್ಲ. ಹಲವು ಜಾತಿ, ಧರ್ಮ, ಭಾಷೆ ಇರುವ ದೇಶ. ಈಗ ಕಾಂಗ್ರೆಸ್ ಗೆ ತಾತ್ಕಾಲಿಕ ಹಿನ್ನಡೆಯಾಗಿದೆ. ಆದರೆ, ಈಗ ಆಡಳಿತದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಜನರನ್ನು ದಾರಿ ತಪ್ಪಿಸುತ್ತಿದೆ. ಬಡಜನರ, ಕೃಷಿಕರ ಬಗ್ಗೆ ಗಮನ ಹರಿಸದೆ, ಪಾಕಿಸ್ತಾನ, ಬಾಲಕೋಟ್, ಚಂದ್ರಯಾನ, ಜಮ್ಮುಕಾಶ್ಮೀರ ಹೀಗೆ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದೆ. ಕಳೆದ ಐದು ವರ್ಷಗಳಲ್ಲಿ ಮೋದಿ ದೇಶಕ್ಕೆ ಕೊಟ್ಟ ಕೊಡುಗೆ ಶೂನ್ಯ ಎಂದು ಆರೋಪಿಸಿದ್ದಾರೆ.
ರೈತರ ಸಮಸ್ಯೆ, ನಿರುದ್ಯೋಗ ಸಮಸ್ಯೆ, ಕಾರ್ಮಿಕರ, ಬಡವರ ಸಮಸ್ಯೆ ಪರಿಹರಿಸಿಲ್ಲ. ದೇಶದ ಆರ್ಥಿಕ ಸ್ಥಿತಿ ದಿವಾಳಿಯತ್ತ ಸಾಗುತ್ತಿದೆ. ಆಹಾರ ಇಲ್ಲದೆ ಜನತೆ ಸಾಯುವಂತಾಗಿದೆ ಎಂದು ಹೇಳಿದರು. ಗಡಿನಾಡಿನ ಕನ್ನಡಿಗರ ರಕ್ಷಣೆ ಸೇರಿದಂತೆ ಯಾವುದೇ ಸಮಸ್ಯೆಗೆ ನಾನು ಸದಾ ಬದ್ದ. ಇಲ್ಲಿನ ಕನ್ನಡಿಗರು, ಕರ್ನಾಟಕದಲ್ಲಿರುವ ಮಲಯಾಳಿಗರು ಒಂದೇ ತಾಯಿಯ ಮಕ್ಕಳಂತೆ ಎಂದು ಭರವಸೆ ನೀಡಿದರು.
ಸಮಾವೇಶದಲ್ಲಿ ಯುಡಿಎಫ್ ಅಭ್ಯರ್ಥಿ ಎಂ .ಸಿ ಖಮರುದ್ದೀನ್, ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಮಾಜಿ ಸಚಿವ ಯು.ಟಿ. ಖಾದರ್, ರಮಾನಾಥ ರೈ , ವಿನಯಕುಮಾರ್ ಸೊರಕೆ, ಪ್ರಮೋದ್ ಮದ್ವರಾಜ್, ಐವನ್ ಡಿ ಸೋಜ, ಮಿಥುನ್ ರೈ, ಶಕುಂತಲಾ ಶೆಟ್ಟಿ, ಹಕೀಮ್ ಕುನ್ನಿಲ್ ಮತ್ತಿತರರು ಉಪಸ್ಥಿತರಿದ್ದರು.