ಮಂಗಳೂರು, ಅ 18 (Daijiworld News/MSP): ಬಿಜೆಪಿ ಪಾದಯಾತ್ರೆಗೆ ವೇಗ ನೀಡಲು 32ನೇ ಜಿಲ್ಲೆ ಯಾದಗಿರಿಗೆ ಬಂದಿದ್ದೇನೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಮಂಜೇಶ್ವರ ಚುನಾವಣಾ ಪ್ರಚಾರ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳಲೆಂದು ಅ. 18 ರ ಶುಕ್ರವಾರ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಮಾತನಾಡಿದ್ರು.
"ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಕರ್ನಾಟಕ ರಾಜ್ಯವೇ ಗೊತ್ತಿಲ್ಲ, ಮತ್ತೆ ಅವರು ಇನ್ನೇನು ಹೇಳ್ತಾರೆ?ಅವರಿಗೆ ಪಾಪ ಮಂಗಳೂರು ಬಿಟ್ರೆ ಮತ್ತೇನೂ ಗೊತ್ತಿಲ್ಲ, ಅದರಿಂದ ಹಾಗೆ ಹೇಳಿದ್ದಾರೆ.ಅವರ ಜ್ಞಾನ ಅಷ್ಟೇ ಇರುವಾಗ ಇನ್ನೇನು ಮಾಡಕ್ಕಾಗುತ್ತೆ" ಎಂದು ವ್ಯಂಗ್ಯವಾಡಿದರು.
ಇದೇ ವೇಳೇ ಸಿದ್ದರಾಮಯ್ಯ ವಿರುದ್ದ ಮಾತನಾಡಿದ್ರೆ ಐಟಿ ದಾಳಿ ಎಂಬ ಅನರ್ಹ ಶಾಸಕ ಬಿ.ಸಿ.ಪಾಟೀಲ್ ಹೇಳಿಕೆ ವಿಚಾರವಾಗಿ ಉತ್ತರಿಸಿದ ಅವರು "ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಎಲ್ಲಾ ನನ್ನ ಜೇಬಲ್ಲಿದ್ದಾರಾ? ಅವ್ರೆಲ್ಲಾ ನಾವು ಹೇಳಿದ ಹಾಗೆ ಕೇಳ್ತಾರಾ? ಇದು ಬಿ.ಸಿ.ಪಾಟೀಲ್ ಅವರ ಬಾಲಿಷ ಹೇಳಿಕೆ, ಫೂಲಿಷ್ ನೆಸ್ ಎಂದು ಹೇಳಿದರು.
ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರಿದ ಅವರು, "ಈ ಸರ್ಕಾರದಲ್ಲಿ ಹೇಳೋರಿಲ್ಲ ಕೇಳೋರಿಲ್ಲ, ನಿಜ ಹೇಳಬೇಕಾದ್ರೆ ರಾಜ್ಯದಲ್ಲಿ ಸರ್ಕಾರವೇ ಇಲ್ಲ. ವರ್ಗಾವಣೆ ದಂಧೆ ಬಿಟ್ಟರೆ, ಆಡಳಿತದಲ್ಲಿ ಯಾವುದೇ ಕೆಲಸ ನಡೆಯುತ್ತಿಲ್ಲ. ರಾಜ್ಯದಲ್ಲಿ ಭೀಕರ ಪ್ರವಾಹ ಬಂದಿದ್ದರೂ ಸಂತ್ರಸ್ತರಿಗೆ ಸೂಕ್ತ ಪರಿಹಾರದ ನೀಡುವ ಕೆಲಸ ಆಗುತ್ತಿಲ್ಲ.ಇದರೊಂದಿಗೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿಯುತ್ತಿದ್ದೂ, ದಿನನಿತ್ಯ ಕೊಲೆ ಸುಲಿಗೆಗಳು ನಡೆಯುತ್ತಿದೆ. ಬಿಜೆಪಿಯವರು ಅಪರೇಷನ್ ಕಮಲ ಬಿಟ್ಟರೆ ಬೇರೇನೂ ಕೆಲಸ ಮಾಡಲ್ಲ. ಇದಕ್ಕಾಗಿ ದೇಶದಲ್ಲಿ ಇವರು ಭ್ರಷ್ಟಾಚಾರ ನಡೆಸಿರುವ ದುಡ್ಡನ್ನು ಬಳಸಿಕೊಳ್ಳುತ್ತಾರೆ. ಐಟಿ-ಇಡಿ ಬಿಟ್ಟು ಬೆದರಿಸೋದು, ಹಾಗೂ ಅಪರೇಷನ್ ಕಮಲ ನಡೆಸೋದು ಬಿಟ್ಟರೆ ಬಿಜೆಪಿಗರಿಗೆ ಬೇರೇನೂ ಗೊತ್ತಿಲ್ಲ" ಎಂದು ಕಿಡಿಕಾರಿದರು.