ಮಂಗಳೂರು, ಅ.18(Daijiworld News/SS): ಅ.16ರಂದು ಮಂಗಳೂರು ದ. ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 72 ಕಡೆಗಳಲ್ಲಿ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆಯನ್ನು ಶಾಸಕ ವೇದವ್ಯಾಸ್ ಕಾಮತ್ ಸೂಚನೆಯ ಮೇರೆಗೆ ಸ್ಥಳೀಯ ಮುಖಂಡರು ನೆರವೇರಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಾಸಕ ಕಾಮತ್, ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವಂತಹ ವಿವಿಧ ವಾರ್ಡ್'ಗಳಲ್ಲಿ ಒಟ್ಟು 72 ಕಾಮಗಾರಿಗಳಿಗೆ ಸ್ಥಳೀಯ ಮುಖಂಡರ ನೇತ್ರತ್ವದಲ್ಲಿ ಗುದ್ದಲಿಪೂಜೆ ನೆರವೇರಿದೆ. ಲೋಕೋಪಯೋಗಿ ಇಲಾಖೆಯಿಂದ 6.29 ಕೋಟಿ ವೆಚ್ಚದಲ್ಲಿ ಒಟ್ಟು 28 ಕಾಮಗಾರಿಗಳು, ಸಾಮಾನ್ಯ ನಿಧಿ ಅನುದಾನದಡಿ 2.13 ಕೋಟಿ ವೆಚ್ಚದಲ್ಲಿ 24 ಕಾಮಗಾರಿಗಳು, ಮಳೆಹಾನಿಗೆ ಸಂಬಂಧಪಟ್ಟ ಕಾಮಗಾರಿಗಳು 1.19 ಕೋಟಿ ವೆಚ್ಚದಲ್ಲಿ ಹಾಗೂ ಕೈಗಾರಿಕಾ ವಲಯದ ಅಭಿವೃದ್ಧಿ ಕಾಮಗಾರಿಗಳು 5.65 ಕೋಟಿ ವೆಚ್ಚದ ಕಾಮಗಾರಿಗಳು ಸೇರಿದಂತೆ ಒಟ್ಟು 15.26 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಗುದ್ದಲಿಪೂಜೆ ಮಾಡುವ ಮೂಲಕ ದಾಖಲೆ ಬರೆದಿದ್ದೇವೆ. ವಿಶೇಷವೆಂದರೆ ಗುದ್ದಲಿಪೂಜೆ ಶಾಸಕರಿಂದಲೇ ನೆರವೇರಬೇಕು ಎನ್ನುವ ಹಳೇಯ ಸಂಪ್ರದಾಯವನ್ನು ಮುರಿದು ಈ ಎಲ್ಲಾ ಕಾಮಗಾರಿಗಳನ್ನು ಸ್ಥಳೀಯರ ಮೂಲಕವೇ ನೆರವೇರಿಸಿದ್ದೇವೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.
ಅಭಿವೃದ್ಧಿಯ ಪಥದತ್ತ ನಾವು ಹೆಜ್ಜೆ ಹಾಕುತ್ತಿದ್ದೇವೆ. ಸರ್ವರನ್ನೂ ಜೊತೆ ಸೇರಿಸಿಕೊಂಡು ಕ್ಷೇತ್ರಾಭಿವೃದ್ಧಿಯ ದೃಷ್ಟಿಯಿಂದ ಅಧಿಕಾರಿಗಳು ಹಾಗೂ ಸಾರ್ವಜನಿಕರ ಹೊಂದಾಣಿಕೆಯಿಂದ ನಾವು ಧ್ಯೇಯ ಚಿತ್ತರಾಗಿ ಸಾಗುತ್ತಿದ್ದೇವೆ. ಮುಂದಿನ ಅವಧಿಯ ಒಳಗಾಗಿ ಮಂಗಳೂರನ್ನು ಅಭಿವೃದ್ಧಿಯ ಉತ್ತುಂಗಕ್ಕೇರಿಸುವ ಮೂಲಕ ತನ್ನ ಜವಬ್ದಾರಿಯನ್ನು ನಿಭಾಯಿಸುತ್ತೇನೆ. ಸರಕಾರದಿಂದ ಅನುದಾನ ತರುವ ನಿಟ್ಟಿನಲ್ಲಿ ನಮ್ಮ ಪ್ರಯತ್ನಗಳು ನಡೆಯುತ್ತಲೇ ಇರುತ್ತದೆ ಎಂದು ಭರವಸೆ ನೀಡಿದ್ದಾರೆ.