ಕಾಸರಗೋಡು, ಅ 17 (DaijiworldNews/SM): ಶಾಸಕ ಅಬ್ದುಲ್ ರಜಾಕ್ ಸಾವಿನಿಂದ ತೆರವಾಗಿದ್ದ ಮಂಜೇಶ್ವರ ವಿಧಾನಸಭಾ ಕ್ಷೇತ್ರಕ್ಕೆ ಇದೀಗ ಉಪ ಚುನಾವಣೆಗೆ ಕ್ಷಣಗಣನೆ ಆರಂಭಗೊಂಡಿದೆ. ಮಂಜೇಶ್ವರ ಕ್ಷೇತ್ರ ಮತ್ತೊಮ್ಮೆ ತ್ರಿಕೋಣ ಸ್ಪರ್ಧಾ ಕಣವಾಗಿದ್ದು, ರಾಷ್ಟ್ರಮಟ್ಟದಲ್ಲಿ ಕ್ಷೇತ್ರ ಗಮನ ಸೆಳೆಯುತ್ತಿದೆ.
ಕಳೆದ 2016ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸುರೇಂದ್ರನ್ ವಿರುದ್ಧ ಪಿ . ಬಿ ಅಬ್ದುಲ್ ರಜಾಕ್ ಕೇವಲ 89 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಸುರೇಂದ್ರನ್ ಆರೋಪಿಸಿ ಕೋರ್ಟ್ ಮೆಟ್ಟಿಲೇರಿದ್ದರು. ಹಲವು ಬೆಳವಣಿಗೆ ಬಳಿಕ ಶಾಸಕ ಅಬ್ದುಲ್ ರಜಾಕ್ ನಿಧನ ಹೊಂದಿದ್ದರು. ಈ ಕಾರಣದಿಂದ ಪ್ರಕರಣವನ್ನು ಸುರೇಂದ್ರನ್ ಹಿಂಪಡೆದಿದ್ದರು.
ಇದೀಗ ಈ ಕ್ಷೆತ್ರದಲ್ಲಿ ಉಪಸಮರಕ್ಕೆ ಭರ್ಜರಿ ಸಿದ್ಧತೆಗಳು ನಡೆಯುತ್ತಿದೆ. ದೇಶದೆಲ್ಲೆಡೆ ಮೋದಿ ಅಲೆ ಹೆಚ್ಚಾಗಿರುವ ಕಾರಣ ಮಂಜೇಶ್ವರ ಕ್ಷೇತ್ರವನ್ನು ಚೊಚ್ಚಲವಾಗಿ ತೆಕ್ಕೆಗೆ ಹಾಕಬೇಕುನ್ನುವ ಲೆಕ್ಕಾಚಾರವನ್ನು ಬಿಜೆಪಿ ಮಾಡಿಕೊಂಡಿದೆ. ಮತ್ತೊಂದೆಡೆ ಯುಡಿಎಫ್ ಹಾಗೂ ಎಲ್ ಡಿಎಫ್ ಗೂ ಈ ಚುನಾವಣೆ ನಿರ್ಣಾಯಕವಾಗಿದೆ.
ಈ ನಡುವೆ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ರಾಷ್ಟ್ರ ಮಟ್ಟದ ಗಮನ ಸೆಳೆಯುತ್ತಿದೆ. ರಾಷ್ಟ್ರ , ರಾಜ್ಯ ಮಟ್ಟದ ನಾಯಕರ ದಂಡು ಮಂಜೇಶ್ವರದತ್ತ ಕಣ್ಣು ನೆಟ್ಟಿದೆ. ತ್ರಿಕೋಣ ಸ್ಪರ್ಧಾ ಕಣದಲ್ಲಿ ಗುರುತಿಸಿಕೊಂಡಿರುವ ಯು ಡಿ ಎಫ್, ಎಲ್ ಡಿ ಎಫ್ ಮತ್ತು ಬಿಜೆಪಿ ತನ್ನೆಲ್ಲ ಶಕ್ತಿ ಮೀರಿ ಗೆಲುವಿಗೆ ಪ್ರಯತ್ನಿಸುತ್ತಿದೆ. ಯು ಡಿ ಎಫ್ ಪರ ಪ್ರಚಾರಕ್ಕೆ ರಾಷ್ಟ್ರ, ರಾಜ್ಯ ಮಟ್ಟದ ನಾಯಕರನ್ನೇ ಮಂಜೇಶ್ವರಕ್ಕೆ ಕರೆಸಲಾಗಿದ್ದು ಭರದ ಪ್ರಚಾರ ಕಾರ್ಯ ನಡೆಯುತ್ತಿದೆ. ಚುನಾವಣೆ ಗೆಲ್ಲುವ ದೃಷ್ಠಿಯಿಂದ ಮೂರೂ ಪಕ್ಷಗಳು ರಾಷ್ಟ್ರ, ರಾಜ್ಯ ನಾಯಕರನ್ನು ಸೆಳೆದು ಮಂಜೇಶ್ವರದ ಮತದಾರರನ್ನು ಓಲೈಸುವ ತಂತ್ರ ನಡೆಸುತ್ತಿದ್ದಾರೆ.
ಅಭಿವೃದ್ಧಿ ಜೊತೆಗೆ ಭಾವನಾತ್ಮಕ ವಿಷಯಗಳು ರಾಜಕೀಯ ಅಸ್ತ್ರಗಳಾಗಿವೆ ಪರಿಣಮಿಸಿದೆ. ಕೇಂದ್ರ - ರಾಜ್ಯ ಸರಕಾರಗಳ ವೈಫಲ್ಯ , ಜನವಿರೋಧಿ ನೀತಿಗಳು ಯು ಡಿ ಎಫ್ ಗೆ ಅಸ್ತ್ರವಾಗಿದೆ. ಮಂಜೇಶ್ವರವನ್ನು ಪ್ರತಿನಿಧಿಸಿದ್ದ ಯು ಡಿ ಎಫ್ ಮತ್ತು ಎಲ್ ಡಿ ಎಫ್ ಶಾಸಕರ ವೈಫಲ್ಯ ಹಾಗೂ ಕ್ಷೇತ್ರ ಅಭಿವೃದ್ಧಿ ಯಲ್ಲಿ ಹಿಂದೆ ಉಳಿದಿದೆ ಎಂಬ ವಿಷಯವನ್ನಾಗಿಸಿಕೊಂಡು ಬಿಜೆಪಿ ಪ್ರಚಾರ ನಡೆಸುತ್ತಿದೆ. ಕೇಂದ್ರ ಸರಕಾರದ ಜನವಿರೋಧಿ ನೀತಿ ಹಾಗೂ ಮಂಜೇಶ್ವರದ ಅಭಿವೃದ್ಧಿ ಹಿನ್ನಡೆಗೆ ಯು ಡಿ ಎಫ್ ಕಾರಣ ಎಂಬ ಅಸ್ತ್ರ ಬಳಸಿ ಎಲ್ ಡಿ ಎಫ್ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದೆ.
ಈ ನಡುವೆ ಕೇಂದ್ರದ ಮಾಜಿ ರಕ್ಷಣಾ ಸಚಿವ ಎ. ಕೆ. ಆಂಟನಿ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಎಐಸಿಸಿ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಮುಲ್ಲಪಳ್ಳಿ ರಾಮಚಂದ್ರನ್ ಸೇರಿದಂತೆ ಹಲವು ಮುಖಂಡರು ಮಂಜೇಶ್ವರದಲ್ಲಿ ಪ್ರಚಾರದಲ್ಲಿ ತೊಡಗಿದ್ದಾರೆ.
ನೆರೆಯ ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಕರ್ನಾಟಕದ ನಾಯಕರುಗಳು ಮಂಜೇಶ್ವರದ ಹಳ್ಳಿ, ಗಲ್ಲಿಗಳಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಕರ್ನಾಟಕದ ಮಾಜಿ ಸಚಿವರಾದ ಪ್ರಮೋದ್ ಮದ್ವರಾಜ್, ಶಾಸಕ ಯು. ಟಿ ಖಾದರ್, ಬಿ . ರಮಾನಾಥ ರೈ, ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ವಿಧಾನಪರಿಷತ್ ಸದಸ್ಯ ಐವನ್ ಡಿ ಸೋಜ, ಮಾಜಿ ಶಾಸಕ ಜೆ ಆರ್ ಲೋಬೊ, ಅಭಯಚಂದ್ರ ಜೈನ್ ಸೇರಿದಂತೆ ಇನ್ನಿತರ ಮುಖಂಡರು ಯು ಡಿ ಎಫ್ ಅಭ್ಯರ್ಥಿ ಎಂ.ಸಿ. ಖಮರುದ್ದೀನ್ ಪರ ಪ್ರಚಾರ ನಡೆಸುತ್ತಿದ್ದಾರೆ.
ಇನ್ನು ಬಿಜೆಪಿ ಅಭ್ಯರ್ಥಿ ರವೀಶ ತಂತ್ರಿ ಕುಂಟಾರು ಪರ ಪ್ರಚಾರಕ್ಕೆ ಕರ್ನಾಟಕ ಬಿಜೆಪಿಯ ರಾಜ್ಯಾಧ್ಯಕ್ಷಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ರಾಜ್ಯ ನಾಯಕರಾದ ಶ್ರೀಧರನ್ ಪಿಳ್ಳೆ, ಕುಮ್ಮನಂ ರಾಜಶೇಖರನ್ ಹಾಗೂ ಕರ್ನಾಟಕ ಕೇರಳದ ವಿವಿಧ ನಾಯಕರು ಮಂಜೇಶ್ವರದಾದ್ಯಂತ ಪ್ರಚಾರ ನಡೆಸುತ್ತಿದ್ದಾರೆ.
ಇನ್ನು ಎಲ್ ಡಿ ಎಫ್ ಅಭ್ಯರ್ಥಿ ಎಂ. ಶಂಕರ ರೈ ಪರ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ ಏಳು ಮಂದಿ ಸಚಿವರು, ಎಲ್ ಡಿ ಎಫ್ ನ ಮುಖಂಡರು, ಸಿಪಿಎಂ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಹಾಗೂ ಇತರ ಮುಖಂಡರು ಮಂಜೇಶ್ವರದತ್ತ ಮುಖ ಮಾಡಿದ್ದು, ಅರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಆದರೆ, ಅಂತಿಮ ನಿರ್ಣಾಯಕ ಭವಿಷ್ಯ ಮಾತ್ರ ಮತದಾರರನ್ನು ಅವಲಂಬಿತವಾಗಿದೆ.