ಉಳ್ಳಾಲ, ಅ 17 (DaijiworldNews/SM): ರೈಲ್ವೇ ಹಳಿ ದಾಟುತ್ತಿದ್ದ ಸಂದರ್ಭದಲ್ಲಿ ರೈಲು ಡಿಕ್ಕಿ ಹೊಡೆದು ಪಾದಚಾರಿಯೋರ್ವರು ಸಾವನ್ನಪ್ಪಿ ಮತ್ತೋಬ್ಬರು ಗಂಭೀರ ಗಾಯಗೊಂಡ ಘಟನೆ ಗುರುವಾರ ಸಂಜೆ ಉಳ್ಳಾಲದ ತೊಕ್ಕೊಟ್ಟು ಬಳಿ ನಡೆದಿದೆ. ಹಾವೇರಿಯ ಆಣೇಕಲ್ಲು ಹುಣಸಿ ನಿವಾಸಿ ಸುಭಾಷ್ (24) ಮೃತರು.
ಕರಾವಳಿಯಲ್ಲಿ ಕಳೆದ ಒಂದುವಾರದಿಂದ ಸಂಜೆಯ ಸಮಯದಲ್ಲಿ ಮಳೆಯಾಗುತ್ತಿದೆ. ಗುರುವಾರದಂದು ಸಂಜೆ ಕೂಡ ಅಲ್ಪ ಅಧಿಕ ಪ್ರಮಾಣದಲ್ಲಿ ಗುಡುಗು ಸಹಿತ ಮಳೆಯಾಗಿದೆ. ಭಾರೀ ಮಳೆಯಿಂದಾಗಿ ಆತುರಪಟ್ಟ ಈ ಇಬ್ಬರು ರೈಲ್ವೇ ಹಳಿ ದಾಟಲು ಮುಂದಾಗಿದ್ದಾರೆ. ಮಳೆಯಿಂದಾಗಿ ರೈಲು ಆಗಮಿಸುವುದು ಅರಿವಿಗೆ ಬಾರದೆ ಅವಘಡ ಸಂಭವಿಸಿದೆ.
ಇನ್ನು ಹಾವೇರಿಯ ಆಣೆಕಲ್ಲು ಹುಣಸಿ ನಿವಾಸಿ ಮಂಜುನಾಥ್(26) ಎಂಬವರು ಗಂಭೀರವಾಗಿ ಗಾಯಗೊಂಡು ಸ್ಥಳೀಯ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ. ಕೂಲಿ ಕಾರ್ಮಿಕರಾಗಿದ್ದ ಇಬ್ಬರು ತೊಕ್ಕೊಟ್ಟು ಬಾಡಿಗೆ ಮನೆಗೆ ಬರುವ ಸಂದರ್ಭ ಹಳಿ ದಾಟುವಾಗ ಘಟನೆ ಸಂಭವಿಸಿದೆ. ಸಂಜೆ ಹೊತ್ತಿಗೆ ಭಾರೀ ಗುಡುಗು ಸಿಡಿಲು ಸಹಿತ ಮಳೆಯಾಗಿದ್ದು, ಅವಸರದಲ್ಲಿ ಇಬ್ಬರು ಕೊಡೆ ಹಿಡಿದು ಹಳಿ ದಾಟುತ್ತಿದ್ದ ಸಂದರ್ಭ ರೈಲಿನ ಸದ್ದು ಕೇಳದೆ, ಇಬ್ಬರಿಗೆ ಢಿಕ್ಕಿಯಾಗಿದೆ. ಇಬ್ಬರು ಹಳಿ ದಾಟಿಯಾಗಿದ್ದು, ರೈಲಿನ ಒಂದು ಬದಿಯಷ್ಟೇ ಡಿಕ್ಕಿಹೊಡೆದು ಸಾವನ್ನಪ್ಪಿದ್ದಾರೆ ಎಂದು ರೈಲ್ವೇ ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ರೈಲ್ವೇ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.