ಕುಂದಾಪುರ, ಜ 6: ಬಸ್ಸು ಮತ್ತು ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಕುಂದಾಪುರ ತಾಲೂಕಿನ ತಲ್ಲೂರಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.
ಮೃತರನ್ನು ನೇರಳೆಕಟ್ಟೆ ನಿವಾಸಿ ಲಕ್ಷಣ್ ಆಚಾರ್ಯ ಮಗ ರವೀಂದ್ರ ಆಚಾರ್ಯ (36) ಎಂದು ಗುರುತಿಸಲಾಗಿದೆ.
ಮೃತರು ಮರ ಕೆಲಸದ ಉದ್ಯೋಗಿಯಾಗಿದ್ದು, ಶನಿವಾರ ಬೆಳಗ್ಗೆ ಕೆಲಸದ ನಿಮಿತ್ತ ಕುಂದಾಪುರ ಕಡೆಯಿಂದ ಹೆಮ್ಮಾಡಿ ಕಡೆಗೆ ಬೈಕ್ ನಲ್ಲಿ ಸಂಚರಿಸುತ್ತಿದ್ದರು. ಈ ವೇಳೆ ಹೆಮ್ಮಾಡಿ ಮಾರ್ಗವಾಗಿ ಬರುತ್ತಿದ್ದ ಖಾಸಗಿ ಬಸ್ಸು ನಿಯಂತ್ರಣ ತಪ್ಪಿ ಬೈಕ್ ಗೆ ಡಿಕ್ಕಿ ಹೊಡೆದಿದ್ದು, ಬೈಕ್ ಸವಾರ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ರವೀಂದ್ರ ಆಚಾರ್ಯ ಕಳೆದ ಒಂದು ವರ್ಷದ ಹಿಂದೆ ಮದುವೆಯಾಗಿದ್ದು ಪತ್ನಿ ಮತ್ತು ಮಗುವನ್ನು ಅಗಲಿರುತ್ತಾರೆ. ಕುಂದಾಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಸ್ಸು ಚಾಲಕನನ್ನು ಠಾಣೆಗೆ ಕರೆಸಿ ತನಿಖೆ ನಡೆಸುತ್ತಿದ್ದಾರೆ.