ಉಡುಪಿ, ಅ 16 (DaijiworldNews/SM): ಶಿರ್ವ ಡಾನ್ಬೊಸ್ಕೋ ಶಾಲೆಯ ಪ್ರಾಂಶುಪಾಲ ಮತ್ತು ಶಿರ್ವ ಚರ್ಚ್ನ ಸಹಾಯಕ ಧರ್ಮಗುರು ಫಾದರ್ ಮಹೇಶ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಇದೀಗ ಹೊಸ ತಿರುವು ಲಭಿಸಿದೆ. ಪೊಲೀಸರು ನಡೆಸಿದ ತನಿಖೆಯಿಂದ ದಾಯ್ಜಿವರ್ಲ್ಡ್ ವಾಹಿನಿಗೆ ಕೆಲವು ಮಹತ್ವದ ವಿವರಗಳು ಲಭ್ಯವಾಗಿದೆ.
ಕ್ರೈಸ್ತ ಸಮುದಾಯದ ಸ್ಥಳೀಯ ಪ್ರಭಾವಿ ರಾಜಕಾರಣಿಯೊಬ್ಬರು ಫಾ. ಮಹೇಶ್ ಅವರ ಆತ್ಮಹತ್ಯೆಯ ಹಿಂದೆ ಶಾಮೀಲಾಗಿದ್ದಾರೆ ಎನ್ನುವ ಶಂಕೆ ಬಲವಾಗಿದೆ. ಈ ಮೊದಲು ಇವರ ಸಾವಿಗೆ ವರ್ಗಾವಣೆ ವಿಚಾರ ಕಾರಣ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದರು. ಆದರೆ ಉಡುಪಿ ಬಿಷಪ್ ಮತ್ತು ಆಡಳಿತ ಸಮಿತಿಯು ಇದನ್ನು ತಿರಸ್ಕರಿಸಿತ್ತು. ಹಾಗೂ ಯಾವುದೇ ವರ್ಗಾವಣೆ ಇವರ ಹಿಂದೆ ಇಲ್ಲ ಎಂದು ಸ್ಪಷ್ಟಪಡಿಸಿದ್ದರು.
ಪೋಸ್ಟ್ ಮಾಟಂ ವರದಿಯಲ್ಲಿ ಆತ್ಮಹತ್ಯೆ ಎಂದು ದೃಢೀಕರಿಸಲಾಗಿತ್ತು. ಆದರೆ ಅಧಿಕೃತ ವರದಿ ಇನ್ನಷ್ಟೇ ಲಭಿಸಬೇಕಾಗಿದೆ. ಸ್ಥಳೀಯ ಠಾಣೆಯ ಪೊಲೀಸರು ಸ್ಥಳೀಯ ಇಬ್ಬರನ್ನು ಕರೆಸಿ ಫಾ. ಮಹೇಶ್ ಅವರ ಸಾವಿನ ಮೊದಲು ನಡೆದ ಕೆಲವು ಘಟನೆಗಳ ಬಗ್ಗೆ ವಿವರಣೆಗಳನ್ನು ದಾಖಲಿಸಿಕೊಂಡಿದ್ದಾರೆ ಎಂದು ದಾಯ್ಜಿವರ್ಲ್ಡ್ಗೆ ಮಾಹಿತಿ ಲಭ್ಯವಾಗಿದೆ.
ಆತ್ಮಹತ್ಯೆಯ ಮೊದಲು ಇರ್ಗರ್ಜಿಯ ವಠಾರಕ್ಕೆ ಸ್ಥಳೀಯ ಪ್ರಭಾವಿ ನಾಯಕ ಅಪ್ರಾಪ್ತ ಪುತ್ರನ ಜೊತೆಗೆ ಇನ್ನಿಬ್ಬರು ಹಿಂಬಾಲಕರನ್ನು ಸೇರಿಸಿಕೊಂಡು ಬೆದರಿಕೆಯೊಡ್ಡಲು ಬಂದಿದ್ದು, ಆ ಸಂದರ್ಭದಲ್ಲಿ ಮಹೇಶ್ ಅವರಿಗೆ ಸಿಕ್ಕಿರಲಿಲ್ಲ ಎಂದು ತಿಳಿದು ಬಂದಿದೆ.
ಬಂದವರ ಪೈಕಿ ಒಬ್ಬರು ಪಾನಮತ್ತರಾಗಿದ್ದರು. ಅಲ್ಲದೆ ಅಲ್ಲಿದ್ದ ಒಬ್ಬರನ್ನು ಕರೆಸಿ, ‘ಮಹೇಶ್ ನನ್ನು ಈಗಲೇ ಇಲ್ಲಿಗೆ ಕರೆಸಿ, ಇಲ್ಲದೇ ಇದ್ದರೆ ನಾನು ಆತನನ್ನು ಕೊಲೆ ಮಾಡುತ್ತೇನೆ’ ಎಂದು ಬೆದರಿಕೆ ಹಾಕಿದ್ದ ಎಂದು ತಿಳಿದು ಬಂದಿದೆ. ‘ ನನ್ನ ಮೇಲೆ ತುಂಬಾ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಪೊಲೀಸರು ನನ್ನ ಜೊತೆಗೆ ಸಲುಗೆಯಿಂದ ಇದ್ದಾರೆ. ನನಗೆ ಜಾಮೀನು ಕೂಡಾ ಸಿಗುತ್ತದೆ. ಆದ್ದರಿಂದ ಮಹೇಶ್ನನ್ನು ನಾನು ಮುಗಿಸುತ್ತೇನೆ. ಈಗ ನಾನು ಚರ್ಚಿನ ಗಂಟೆಗಳನ್ನು ಬಾರಿಸಿ, ಜನರಿಗೆ ಮಹೇಶ್ ಅವರ ವಿಚಾರಗಳನ್ನು ತಿಳಿಸುತ್ತೇನೆ’ ಎಂದು ಅಬ್ಬರಿಸಿದ್ದಾನೆ.
ಈ ಸಂದರ್ಭ ಫಾ. ಮಹೇಶ್ ಶಾಲೆಯಲ್ಲೇ ಇದ್ದು, ಈ ಘಟನೆಯಿಂದ ವಿಚಲಿತರಾಗಿ ಆತ್ಮಹತ್ಯೆಗೈದರೋ ಅಥವಾ ಆ ಬಳಿಕ ಆತ್ಮಹತ್ಯೆ ಮಾಡಿಕೊಂಡರೋ ಎನ್ನುವುದು ಇನ್ನಷ್ಟೇ ವಿಚಾರಣೆಯಿಂದ ತಿಳಿದು ಬರಬೇಕಾಗಿದೆ. ಚರ್ಚ್ಗೆ ಇವರು ಆಗಮಿಸಿದ್ದ ಸಂದರ್ಭದಲ್ಲಿ ಇಲ್ಲಿ ಅಳವಡಿಸಲಾಗಿರುವ ಸಿಸಿಟಿವಿಯಲ್ಲಿ ಈ ಎಲ್ಲಾ ದೃಶ್ಯಾವಳಿಗಳು ಸೆರೆಯಾಗಿದೆ.
ಇದೀಗ ಪ್ರಕರಣ ತನಿಖಾ ಹಂತದಲ್ಲಿ ಇರುವುದರಿಂದ ಇದರಲ್ಲಿ ಶಾಮೀಲಾಗಿರುವ ವ್ಯಕ್ತಿಗಳ ಹೆಸರುಗಳನ್ನು ದಾಯ್ಜಿವರ್ಲ್ಡ್ ಉಲ್ಲೇಖೀಸುವಂತಿಲ್ಲ. ದಾಯ್ಜಿವರ್ಲ್ಡ್ ಇದು ಬೆದರಿಕೆ ಅಥವಾ ಬ್ಲ್ಯಾಕ್ಮೇಲ್ ಪ್ರಕರಣದಿಂದ ನಡೆದ ಘಟನೆಯೋ ಎಂದು ಖಚಿತಪಡಿಸಲು ಶ್ರಮಿಸುತ್ತಿದೆ. ದಾಯ್ಜಿವರ್ಲ್ಡ್ಗೆ ದೊರೆತ ಮಾಹಿತಿ ಪ್ರಕಾರ ಪೊಲೀಸ್ ಆಯುಕ್ತರು ವೈಯಕ್ತಿಕ ಆಸಕ್ತಿಯಿಂದ ಈ ಪ್ರಕರಣವನ್ನು ಕೈಗೆತ್ತಿಕೊಂಡಿದ್ದು, ಆದಷ್ಟು ಬೇಗನೇ ಪ್ರಕರಣ ಸತ್ಯಾಂಶವನ್ನು ಬೆಳಕಿಗೆ ತರಲಿದ್ದಾರೆ.
ದಾಯ್ಜಿವರ್ಲ್ಡ್ ಜೊತೆಗೆ ಮಾತನಾಡಿದ ಉಡುಪಿಯ ಧರ್ಮಪ್ರಾಂತ್ಯದ ಧರ್ಮಗುರುವೊಬ್ಬರು ಫಾದರ್ ಮಹೇಶ್ ಅವರು ವರ್ಗಾವಣೆ ವಿಚಾರಣೆಯಂತಹ ಚಿಕ್ಕ ವಿಷಯಕ್ಕೆ ಆತ್ಮಹತ್ಯೆ ಮಾಡುವ ಸ್ವಭಾವದವರಲ್ಲ. ಆತ್ಮಸ್ಥೈರ್ಯವುಳ್ಳವರಾಗಿದ್ದರು. ವರ್ಗಾವಣೆ ವಿಚಾರ ಬಂದಾಗ ಸಮ್ಮತಿಸಬೇಕಾಗುವುದು ಅವರ ಕರ್ತವ್ಯ. ಆದರೆ ಈ ಆತ್ಮಹತ್ಯೆಯ ಹಿಂದೆ ಯಾವುದೋ ನಿಗೂಢ ಕಾರಣ ಇದೆ’ ಎಂದಿದ್ದಾರೆ.
ಇವರ ಸಾವಿನ ಘಟನೆ ಬಗ್ಗೆ ಜನತೆ ಯಾವುದೇ ವದಂತಿಗಳಿಗೆ ಕಿವಿಗೊಡಬಾರದು. ಹಾಗೂ ಇನ್ಯಾವುದೋ ಕಪೋಲಕಲ್ಪಿತ ಸುದ್ದಿಗಳನ್ನು ಹರಡಿಸಬಾರದು ಎಂದು ಉಡುಪಿ ಧರ್ಮಪ್ರಾಂತ್ಯ ವಿನಂತಿಸಿದೆ.
‘ನಮಗೆ ಪೊಲೀಸ್ ಹಾಗೂ ನ್ಯಾಯಾಂಗ ವ್ಯವಸ್ಥೆ ಮೇಲೆ ಪೂರ್ಣ ನಂಬಿಕೆ ಇದೆ. ಸತ್ಯ ಹೊರಬರುವವರೆಗೆ ನಾವು ಕಾಯುತ್ತೇವೆ’ ಎಂದು ಇನ್ನೊಬ್ಬ ಹಿರಿಯ ಧರ್ಮಗುರುವೊಬ್ಬರು ಹೇಳಿದ್ದಾರೆ.
ಇನ್ನು ಮಂಗಳವಾರ ನಡೆದ ಫಾದರ್ ಮಹೇಶ್ ಅಂತ್ಯಕ್ರಿಯೆಯಲ್ಲಿ ೧೦,೦೦೦ಕ್ಕಿಂತಲೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಇದು ಫಾದರ್ ಮಹೇಶ್ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಉಡುಪಿ ಧರ್ಮಪ್ರಾಂತ್ಯದ ಹಿರಿಯ ಹಾಗೂ ಕಿರಿಯ ಧರ್ಮಗುರುಗಳ ಜೊತೆಗೆ ಮಹೇಶ್ ಅತ್ಯುತ್ತಮ ಬಾಂಧವ್ಯ ಹೊಂದಿದ್ದು, ಜನಾನುರಾಗಿಯಾಗಿದ್ದರು ಎನ್ನುವುದನ್ನು ತೋರಿಸಿದೆ.