ಕೋಟೇಶ್ವರ, ಅ 16 (Daijiworld News/MSP): ಕೋಟೇಶ್ವರ ಕರ್ನಾಟಕ ಪಬ್ಲಿಕ್ ಸ್ಕೂಲ್ ಮೈದಾನದಲ್ಲಿ ಕಶ್ವಿ ಚೆಸ್ ಸ್ಕೂಲ್ನ ವತಿಯಿಂದ ನಡೆಯುತ್ತಿರುವ ಅಂತರಾಷ್ಟ್ರೀಯ ಮಟ್ಟದ ಚೆಸ್ ಪಂದ್ಯಾಟದ ಎರಡನೇ ಪಂದ್ಯಾಟ ಫಿಡೆ ರೇಟಿಂಗ್ 1600ಕ್ಕಿಂತ ಕಡಿಮೆ ಇರುವ ಆಟಗಾರರ ಚೆಸ್ ಪಂದ್ಯಾಟ ಅಕ್ಟೋಬರ್ 15 ರಂದು ಆರಂಭಗೊಂಡಿತು.ಅಕ್ಟೋಬರ್ 17 ರ ತನಕ ಈ ಪಂದ್ಯಾಟ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಕಾಮನ್ ವೆಲ್ತ್ 2018ರಲ್ಲಿ ಚಿನ್ನದ ಪದಕ ಗೆದ್ದ ಮಂಗಳೂರಿನ ಪ್ರಸಿದ್ದ ಚೆಸ್ ಆಟಗಾರ್ತಿ ಶ್ರೀಯಾನ್ ಮಲ್ಯ ನೆರವೇರಿಸಿದರು.
ಶ್ರೀಯಾನ್ ಮಲ್ಯ ತನಗೆ ಅವಕಾಶ ಕಲ್ಪಿಸಿಕೊಟ್ಟದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿ, ತಾನು ಪ್ರತಿದಿನ ಐದರಿಂದ ಆರು ತಾಸು ಅಭ್ಯಾಸ ಮಾಡುತ್ತೇನೆ. ಆನ್ ಲೈನ್ ಮುಖಾಂತರ ಕೋಚಿಂಗ್ ಪಡೆಯುತ್ತಿರುವುದಾಗಿ ತಿಳಿಸಿದರು.
’ಈ ಚೆಸ್ಪಂದ್ಯಾಟ ನಡೆಯುತಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಕೆಸಿಎಸ್, ಚೆಸ್ ಸ್ಕೂಲ್ ಹಾಗೂ ಕರ್ನಾಟಕ ಪಬ್ಲಿಕ್ ಸ್ಕೂಲ್ನ ಹಳೆ ವಿದ್ಯಾರ್ಥಿ ಸೇರಿ ಮಡಿದ ಕಾರ್ಯಕ್ರಮ ಯಶಸ್ಸನ್ನು ಕಾಣುತ್ತಿದೆ.
ಚೆಸ್ ನಮ್ಮ ಮೆದುಳು ಚುರುಕಾಗಲು ಹಾಗೂ ವ್ಯಾಯಾಮವನ್ನು ಕೊಡುವ ಒಂದು ಕ್ರೀಡೆ. ಹೊರಾಂಗಣ ಆಟಗಳು ದೈಹಿಕ ವ್ಯಾಯಾಮ ನೀಡಿದರೆ, ಚೆಸ್ನಿಂದ ಬೌದ್ದಿಕ ಬೆಳವಣಿಗೆಗೆ ಸಹಕಾರಿ. ಚೆಸ್ನಲ್ಲಿ ಕಪ್ಪು ಮತ್ತು ಬಿಳಿ ಪೀಸ್ಗಳು ಇದ್ದರೆ ಆಟದ ಕೊನೆಗೆ ಎಲ್ಲವೂ ಒಂದೇ ಬಾಕ್ಸ್ ನೊಳಗೆ ಸೇರುತ್ತದೆ. ಇದು ನಮ್ಮ ಜೀವನಕ್ಕೆ ಪಾಠ ಕಲಿಸಿಕೊಡುತ್ತದೆ. ಗೆಲುವಿಗೆ ಯಾವುದೇ ತಾರತಮ್ಯ ಇಲ್ಲ. ಕೆಲವರಿಗೆ ತಮ್ಮ ಬಗ್ಗೆ ಕೀಳರಿಮೆ ಇದೆ. ಆದರೆ ನಮ್ಮಲ್ಲಿರುವ ಆಂತರಿಕ ಶಕ್ತಿಯಿಂದ ಇದು ಸಾಧ್ಯವಾಗುತ್ತದೆ.ಕುಂದಾಪುರ ಗಾಲಾಕ್ಸಿ ಸ್ಪೋಟ್ಸ್ನ ಮಾಲಿಕ ಸದಾನಂದ ನಾವಡ ಹೇಳಿದರು.
ಕಾರ್ಯಕ್ರಮದಲ್ಲಿ ಕೋಟೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಾಂತ ಗೋಪಾಲಕೃಷ್ಣ ,ಬಹರೈನ್ ಪ್ರೆಸಿಡೆಂಟ್ ಗ್ರೂಪ್ನ ಪರವಾಗಿ ಇಸ್ಮಾಯಿಲ್ ಸಾಹೇಬ್, ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ಕಾರ್ಯದರ್ಶಿ ನಾಗರಾಜ ರಾಯಪ್ಪನಮಟ, ೨೦೧೮ ಕಾಮನ್ವೆಲ್ತ್ ಗೇಮ್ಸ್ನ ಚಿನ್ನದ ಪದಕ ವಿಜೇತೆ ಶ್ರೀಯಾನ ಮಲ್ಯ, ಹಳೆ ವಿಧ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಸುಬ್ರಮಣ್ಯ ಶೆಟ್ಟಿಗಾರ, ಕಶ್ವಿ ಚೆಸ್ ಸ್ಕೂಲ್ನ ನರೇಶ ಬಾಬು, ಪ್ರಾಶುಂಪಾಲ ಗುರುರಾಜ ಶೆಟ್ಟಿ ಉಪಸ್ಥಿತರಿದ್ದರು. ಅವಿನಾಶ ಕಾಮತ್ ಕಾರ್ಯಕ್ರಮ ನಿರ್ವಹಿಸಿದರು. ಇದಕ್ಕೂ ಜೀ ಕನ್ನಡದ ಕಾರ್ಯಕ್ರಮ ಕನ್ನಡದ ಕನ್ಮಣಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಾನಿಧ್ಯ ಇವರಿಂದ ಯಕ್ಷಗಾನ ನೃತ್ಯ ಪ್ರದರ್ಶನ ನಡೆಯಿತು.