ಕುಂದಾಪುರ, ಅ 15 (DaijiworldNews/SM): ರೈಲು ಪ್ರಯಾಣಿಕರ ಕಳೆದ ಹತ್ತು ವರ್ಷಗಳ ಬೇಡಿಕೆಯಾಗಿದ್ದ ಕೊಚ್ವುವೇಲಿ-ಶ್ರೀಗಂಗಾನಗರ್ ಎಕ್ಸ್ ಪ್ರೆಸ್ ರೈಲಿಗೆ ನಿಲುಗಡೆ ಕೊಡಿಸುವಲ್ಲಿ ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಅಕ್ಟೋಬರ್ 15ರಂದು ಕೇಂದ್ರ ರೈಲ್ವೇ ಇಲಾಖೆಯ ರಾಜ್ಯ ಸಚಿವ ಸುರೇಶ್ ಅಂಗಡಿ ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆಯವರಿಗೆ ಪತ್ರ ಬರೆದಿದ್ದು, ಅಧಿಕೃತ ನಿಲುಗಡೆ ಘೋಷಿಸಿದ್ದಾರೆ.
ಕಳೆದ ಜುಲೈ ಮೂರರಂದು ದೆಹಲಿಯಲ್ಲಿ ರೈಲ್ವೇ ಸಚಿವರನ್ನು ಭೇಟಿಯಾಗಿದ್ದ ಜಯಪ್ರಕಾಶ್ ಹೆಗ್ಡೆ, ತಕ್ಷಣವೇ ಬಹುಕಾಲದ ಈ ಬೇಡಿಕೆಗೆ ಸಚಿವಾಲಯದ ಆದೇಶ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರತೀ ಆದಿತ್ಯವಾರ ಬೆಳಿಗ್ಗೆ ಆರೂ ನಲವತ್ತಕ್ಕೆ ಕೇರಳದಿಂದ ತಲುಪಿ ಕುಂದಾಪುರದಿಂದ ಗೊವಾ ಮುಂಬಯಿ ಮಾರ್ಗವಾಗಿ ಗುಜರಾತಿನ ಸಿಲ್ವಾಸ, ವಾಪಿ, ಮಾರ್ಗವಾಗಿ ರಾಜಸ್ತಾನದ ಜೋದ್ ಪುರ, ಬಿಕಾನೆರ್ ಮಾರ್ಗವಾಗಿ ಶ್ರೀಗಂಗಾನಗರ ತಲುಪುವ ಈ ರೈಲಿನಿಂದ ಆದಿತ್ಯವಾರ ಬೇಗನೆ ಗೋವಾ ತಲುಪಿ ಅದೇ ದಿನ ವಾಪಾಸು ಬರುವವರಿಗೆ, ಮುಂಬಯಿಗೆ ಸಂಜೆಯ ವೇಳೆ ತಲುಪ ಬೇಕಾದವರಿಗೆ, ಸಿಲ್ವಾಸ ವಾಪಿ ಮುಂತಾದ ಗುಜರಾತ್ ಕರಾವಳಿಯಲ್ಲಿ ನೆಲೆಸಿದ ಕುಂದಾಪುರದವರಿಗೆ, ರಾಜಸ್ತಾನ್ ತಲುಪುವವರಿಗೆ ಈ ರೈಲು ಅನುಕೂಲವಾಗಲಿದೆ.
ಕೊಲ್ಲೂರು ಆನೆಗುಡ್ಡೆ ದೇಗುಲಗಳ ಭಕ್ತಾದಿಗಳಿಗೂ ಈ ನಿಲುಗಡೆ ಸಹಾಯವಾಗಲಿದೆ. ಪ್ರತೀ ಗುರುವಾರ ಮಧ್ಯಾಹ್ನ ಒಂದೂವರೆ ಗಂಟೆಗೆ ಕೇರಳದ ಕಡೆ ಸಂಚರಿಸಲಿದೆ.