ಮ0ಗಳೂರು ಸೆ14: ಬಾಲಕಾರ್ಮಿಕ ಪದ್ಧತಿಯು ಒಂದು ಸಾಮಾಜಿಕ ಪಿಡುಗಾಗಿದ್ದು ಈ ಪದ್ಧತಿಯನ್ನು ಸಂಪೂರ್ಣವಾಗಿ ತೊಡೆದು ಹಾಕಲು ಸಮಾಜದಲ್ಲಿನ ಸರ್ವರ ಸಹಕಾರ ಅತ್ಯಗತ್ಯವಾಗಿದೆ. ಬಾಲಕಾರ್ಮಿಕ(ನಿಷೇಧ ಮತ್ತು ನಿಯಂತ್ರಣ ಕಾಯ್ದೆ -1986ನ್ನು ಜಾರಿಗೆ ತಂದಿದ್ದರೂ ಕೂಡ ಇನ್ನೂ ಕೂಡ ಬೆರಳೆಣಿಕೆಯಷ್ಟು ಪ್ರಕರಣಗಳು ವರದಿಯಾಗುತ್ತಿರುವುದು ತೀರ ವಿಷಾಧನೀಯ. ಮುಂದುವರಿದು ಕೇಂದ್ರ ಸರ್ಕಾರವು ಈ ಕಾಯ್ದೆಗೆ ಜುಲೈ-30, 2016ರಲ್ಲಿ ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ -1986ನ್ನಾಗಿ ತಿದ್ದುಪಡಿ ಮಾಡಿರುತ್ತದೆ. ಇದರಂತೆ 14 ವರ್ಷದೊಳಗಿನ ಮಕ್ಕಳನ್ನು ಯಾವುದೇ ಕ್ಷೇತ್ರದಲ್ಲಿ ಹಾಗೂ 14 ರಿಂದ 18 ವರ್ಷದೊಳಗಿನ ಕಿಶೋರಾವಸ್ಥೆಯ ಮಕ್ಕಳನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ದುಡಿಸಿಕೊಳ್ಳುವಂತಿಲ್ಲ.
ಈ ಕಾಯಿದೆಯಲ್ಲಿರುವ ತೀವ್ರ ಮತ್ತು ಕಠಿಣ ಸ್ವರೂಪವಾದ ದಂಡನೆ ಇದ್ದರೂ ಸಹ ಇದರ ಅರಿವು ಕೆಲವರಿಗೆ ತಿಳಿಯದ ಹಿನ್ನೆಲೆಯಲ್ಲಿ ಈ ರೀತಿ ಮರುಕಳಿಸುತ್ತಿದೆ ಎಂದು ಭಾವಿಸಲಾಗಿದೆ. ಈ ಕಾಯಿದೆಯಂತೆ ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಂಡು ಪ್ರಕರಣಗಳು ಸಾಬೀತಾದಲ್ಲಿ 6 ತಿಂಗಳಿಗೆ ಕಡಿಮೆ ಇಲ್ಲದ ಹಾಗೂ 2 ವರ್ಷದವರೆಗೆ ವಿಸ್ತರಿಸಬಹುದಾದ ಕಠಿಣ ಶಿಕ್ಷೆ ವಿಧಿಸಲು ಅವಕಾಶ ಇರುತ್ತದೆ. ಅಲ್ಲದೇ ರೂ. 20,000/-ಗಿಂತ ಕಡಿಮೆ ಇಲ್ಲದಂತೆ ರೂ. 50,000/- ದವರೆಗೆ ದಂಡ ವಿಧಿಸಬಹುದಾಗಿರುತ್ತದೆ. ಮುಂದುವರಿದು ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕರ ಪುನರ್ವಸತಿಗಾಗಿ ರೂ.20,000/- ಕಾರ್ಪಸ್ ನಿಧಿಯನ್ನು ಪಾವತಿಸಬೇಕಾಗಿರುತ್ತದೆ.
ಬಾಲಕಾರ್ಮಿಕ ನಿಷೇಧದ ಬಗ್ಗೆ ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಶಿಬಿರಗಳನ್ನು ಮತ್ತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಲಾಗಿದೆ. 2011-12 ನೇ ಸಾಲಿನಿಂದ ಇದುವರೆಗೆ ಒಟ್ಟು 26 ಬಾಲಕಾರ್ಮಿಕರನ್ನು ಪತ್ತೆ ಹಚ್ಚಲಾಗಿದೆ. 2016-17ನೇ ಸಾಲಿನಲ್ಲಿ 2 ಹಾಗೂ 2017-18 ನೇ ಸಾಲಿನಲ್ಲಿ 1 ಬಾಲಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಂಡಿರುವ ಬಗ್ಗೆ 2 ಪ್ರಕರಣವನ್ನು ದಾಖಲಾಗಿದೆ. ಗ್ರಾಮ ಪಂಚಾಯತ್ ಮಟ್ಟದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ-1986ರ ಕಲಂ-17 ರಡಿ ನಿರೀಕ್ಷಕರನ್ನಾಗಿ ನೇಮಿಸಿದ್ದು, ಗ್ರಾಮ ಮಟ್ಟದಲ್ಲಿ ಬಾಲಕಾರ್ಮಿಕತೆಯನ್ನು ನಿಯಂತ್ರಿಸುವ ಹೊಣೆಗಾರಿಕೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ್ದಗಿರುತ್ತದೆ. ಆದ್ದರಿಂದ ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ ಪದ್ಧತಿಯನ್ನು ತಡೆಗಟ್ಟಲು ಎಲ್ಲರೂ ಸನ್ನದ್ಧರಾಗಬೇಕಾಗಿದೆ, ಮತ್ತು ಬಾಲಕಾರ್ಮಿಕ ಪ್ರಕರಣಗಳು ಕಂಡು ಬಂದಲ್ಲಿ ಸಂಬಂಧಿಸಿದ ಮಾಲೀಕರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ದ.ಕ ಜಿಲ್ಲಾಧಿಕಾರಿ, ಕೆ.ಜಿ. ಜಗದೀಶ್ ತಿಳಿಸಿದ್ದಾರೆ.