ಮಂಗಳೂರು, ಜ 5: ಕರಾವಳಿಯಲ್ಲಿ ಕೋಮು ಗಲಭೆ ಕಡಿಮೆಯಾಗಬೇಕಾದರೆ ಧರ್ಮಗಳ ನಡುವೆ ಐಕ್ಯತೆ, ಸೌಹಾರ್ದತೆ ಕಾಪಾಡಬೇಕು ಎಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಉಪಾಧ್ಯಕ್ಷ ರಹೀಂ ಉಚ್ಚಿಲ್ ತಿಳಿಸಿದ್ದಾರೆ.
ದಾಯ್ಜಿವರ್ಲ್ಡ್ ವಾಹಿನಿ ಜೊತೆ ಮಾತಾನಾಡಿದ ಅವರು, ಕೆಲ ದಿನಗಳಲ್ಲಿ ಕರಾವಳಿಯಲ್ಲಿ ಕೋಮು ಗಲಭೆ, ಕೋಮು ದ್ವೇಷಗಳು ಹೆಚ್ಚಾಗುತ್ತಿದೆ. 5 ವರ್ಷಗಳ ಹಿಂದೆ ಶಾಂತಿಯುತವಾಗಿದ್ದ ಮಂಗಳೂರಿನಲ್ಲಿ ಕ್ಷುಲ್ಲಕ ಕಾರಣಗಳಿಂದ ಗಲಾಟೆಗಳು ನಡೆದು ಧರ್ಮದ ನಡುವೆ ದ್ವೇಷ ಬೆಳೆಯುತ್ತಿದೆ. ಇದರಿಂದ ಕರಾವಳಿ ಕೋಮು ಸೂಕ್ಷ್ಮ ತಾಣವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ದೀಪಕ್ ರಾವ್ ಅಮಾಯಕ. ಅವನಿಗೆ ಮುಸ್ಲಿಂ ಭಾಷೆ ಚೆನ್ನಾಗಿ ಗೊತ್ತಿತ್ತು. ಯಾವುದೇ ಧರ್ಮದ ಬಗ್ಗೆ ದ್ವೇಷ ಅವನಿಗೆ ಇರಲಿಲ್ಲ. ದೀಪಕ್ ಸಾಯುವಾಗ ಅವನಿಗೆ ಯಾಕೆ ಸಾಯುತ್ತಿದ್ದೇನೆ ಅನ್ನುವ ಅರಿವು ಕೂಡ ಇರಲಿಲ್ಲ. ಯಾವುದೇ ಕಾರಣವಿಲ್ಲದೆ ಅಮಾಯಕ ಬಲಿಯಾಗಿರುವುದು ನಿಜಕ್ಕೂ ಬೇಸರ ತಂದಿದೆ ಎಂದು ಹೇಳಿದರು.
ಹಿಂದು ಮುಸ್ಲಿಮರ ನಡುವೆ ಸೌಹರ್ದತೆ ಬೆಳೆಯಬೇಕು. ರಾಮ- ರಹೀಮರು ಇಲ್ಲಿ ಒಂದಾಗಬೇಕು. ಪ್ರತಿಯೊಂದು ಧರ್ಮದ ಧರ್ಮ ಗುರುಗಳು ಜನರಿಗೆ ಕೂಡಿ ಬಾಳುವ ಕುರಿತು ಬೋಧನೆ ಮಾಡಬೇಕು. ಆಗ ಧರ್ಮಗಳ ನಡುವೆ ಶಾಂತಿ ನೆಲೆಸಲು ಸಾಧ್ಯ ಎಂದು ಹೇಳಿದರು.
ಕರಾವಳಿಯಲ್ಲಿ ಹೆಚ್ಚಾಗುತ್ತಿರುವ ಕೋಮು ಗಲಭೆಯಿಂದ ಪೊಲೀಸರು, ವಕೀಲರು ಇಲ್ಲಿ ಜಾಗೃತರಾಗಬೇಕು. ರಾಜಕೀಯದ ಹಸ್ತಕ್ಷೇಪವಿಲ್ಲದೆ ಪೊಲೀಸರು, ವಕೀಲರು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಬೇಕು. ತಪ್ಪು ಮಾಡಿದವರು ರಾಜರೋಷವಾಗಿ ಹೊರಗಡೆ ತಿರುಗುತ್ತಾರೆ. ಆದರೆ ಅಮಾಯಕರು ಬಲಿಪಶುಗಳಾಗುತ್ತಿದ್ದಾರೆ ಎಂದು ಹೇಳಿದರು.