ಕಾಪು, ಅ 13 (Daijiworld News/MSP): ಕಾಪು ಪೊಲೀಸರು ಇಬ್ಬರು ಕುಖ್ಯಾತ ಕಳ್ಳರನ್ನು ಬಂಧಿಸಿದ್ದಾರೆ. ಇವರಿಬ್ಬರು ಇತ್ತೀಚೆಗೆ ಇನ್ನಂಜೆ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದ್ದ ಮಹಿಳೆಯೋರ್ವರ ಸರಕಳವು ಪ್ರಕರಣದಲ್ಲಿ ಭಾಗಿಯಾಗಿದ್ದರು.
ಬಂಧಿತರನ್ನು ಮೂಲತಃ ರಾಯಚೂರು ಜಿಲ್ಲೆಯ , ಪ್ರಸ್ತುತ ಮಟ್ಟು ಗ್ರಾಮದ ಪಳ್ಲುಗುಡ್ಡೆಯಲ್ಲಿ ವಾಸವಾಗಿದ್ದ ಕೃಷ್ಣ ನರಸಿಂಹ ಶಾಸ್ತ್ರೀ (27) ಮತ್ತು ಬಾಗಲಕೋಟೆ ಮೂಲದ ವಿಜಯ್ ಕುಮಾರ್ (21) ಎಂದು ಗುರುತಿಸಲಾಗಿದೆ. ಕೆಲವು ದಿನಗಳ ಹಿಂದೆ ಇನ್ನಂಜೆ ಗ್ರಾಮದ ಮೂಡುಮನೆಯ ಶಾಂತಾ ಆಚಾರ್ಯ ಎಂಬವರು ಹುಲ್ಲು ತರಲೆಂದು ನಡೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ ಇಬ್ಬರು ಆರೋಪಿಗಳು ಬೈಕ್ ನಲ್ಲಿ ಅವರ ಚಿನ್ನದ ಸರವನ್ನು ಕಸಿದಿದ್ದರು. ಈ ಸಂಬಂಧ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಗಳು ಕದ್ದಿದ್ದ 50 ಸಾವಿರ ಮೌಲ್ಯದ ಚಿನ್ನದ ಸರ, ಹಾಗೂ ಕೃತ್ಯಕ್ಕೆ ಬಳಸಿದ್ದ ಹೋಂಡಾ ಶೈನ್ ಬೈಕ್, ಹತ್ತು ಸಾವಿರ ನಗದನ್ನು ವಶಪಡಿಸಲಾಗಿದೆ.