ಮಂಗಳೂರು, ಅ 12 (Daijiworld News/MSP): ನಗರದಲ್ಲಿ ಅಪಘಾತಗಳಿಗೆ ಕಾರಣವಾಗುತ್ತಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಗುಂಡಿಗಳನ್ನು ಮುಚ್ಚುವಂತೆ ಸಾಮಾಜಿಕ ಕಾರ್ಯಕರ್ತರಿಬ್ಬರು ಅ 12 ರ ಶನಿವಾರ ನಂತೂರು ವೃತ್ತದಲ್ಲಿ ಮೌನ ಪ್ರತಿಭಟನೆ ನಡೆಸಿದರು.
ಸಾಮಾಜಿಕ ಕಾರ್ಯಕರ್ತರಾದ ಅರ್ಜುನ್ ಮಸ್ಕರೇನಸ್ ಮತ್ತು ರೂಪನ್ ಫರ್ನಾಂಡಿಸ್ ಗುಂಡಿಮಯ ಹೆದ್ದಾರಿ ವಿರುದ್ಧ ಮೌನ ಪ್ರತಿಭಟನೆ ನಡೆಸಿದ್ದು, ಎರಡು ವಾರಗಳ ಹಿಂದೆ ಅವರು ಹೊಂಡಮಯ ನಂತೂರು ಸರ್ಕಲ್ ಹಾಗೂ ರಸ್ತೆ ಗುಂಡಿಗಳ ವಿರುದ್ಧ ಮಂಗಳೂರು ನಗರ ಪಾಲಿಕೆ ಮುಂದೆಯೂ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಅಧಿಕಾರಿಗಳು ಇವರನ್ನು ಭೇಟಿಯಾಗಿ ಹೆದ್ದಾರಿಯಲ್ಲಿರುವ ಗುಂಡಿಗಳನ್ನು ಮುಚ್ಚುವ ಭರವಸೆ ನೀಡಿದ್ದರು.
ಇದೀಗ ಮತ್ತೆ ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಗುಂಡಿಗಳನ್ನು ಮುಚ್ಚಲು ನಂತೂರಿನಲ್ಲಿ ಮೌನ ಪ್ರತಿಭಟನೆ ನಡೆಸಿದ್ದಾರೆ. ಇದಾದ ಬಳಿಕ ರಾಷ್ಟೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದ್ದಾರೆ.
ಜಿಲ್ಲೆಯಲ್ಲಿ ಸುರಿದ ವಿಪರೀತ ಮಳೆಯಿಂದ ರಾಷ್ಟ್ರೀಯ ಹೆದ್ದಾರಿಯ ಹೊಂಡಮಯವಾಗಿದೆ. ಹಲವಾರು ಸಂಘಟನೆಗಳು ರಸ್ತೆ ದುರಸ್ತಿಗೆ ಒತ್ತಾಯಿಸಿದ್ದರು. ಆದರೆ ಸಾರ್ವಜನಿಕರ ಬೇಡಿಕೆಗಳಿಗೆ ಸ್ಪಂದಿಸಬೇಕಾಗಿದ್ದ ಅಧಿಕಾರಿ ವರ್ಗ ಹಾಗೂ ಜನಪ್ರತಿನಿಧಿಗಳು ಮಾತ್ರ ಈ ಬಗ್ಗೆ ಮೌನವಾಗಿದ್ದಾರೆ.
ದಾಯ್ಜಿವರ್ಲ್ಡ್ ಜೊತೆ ಮಾತನಾಡಿದ ರೂಪನ್ ಫರ್ನಾಂಡಿಸ್, "ರಾಷ್ಟ್ರೀಯ ಹೆದ್ದಾರಿಯ ದುರಸ್ತಿ ಹಾಗೂ ನಂತೂರ್ ಸರ್ಕಲ್ ನ ತೀವ್ರ ಹದಗೆಟ್ಟ ರಸ್ತೆ ಬಗ್ಗೆ ಅಧಿಕಾರಿಗಳ ಗಮನ ಸೆಳೆಯಲೆಂದು ಮೌನ ಪ್ರತಿಭಟನೆ ನಡೆಸುತ್ತಿದ್ದೇವೆ. ಗುಂಡಿಮಯ ಹೆದ್ದಾರಿಯಿಂದಾಗಿ ಅತಿ ಹೆಚ್ಚು ಅಪಘಾತ ಸಂಭವಿಸಿದೆ. ಈ ಬಗ್ಗೆ ಎಲ್ಲರೂ ಒಗ್ಗಟ್ಟಾಗಿ ಧ್ವನಿ ಎತ್ತಬೇಕಾಗಿದೆ. ಸುರಕ್ಷಿತ ಚಾಲನೆಗಾಗಿ ಸಮರ್ಪಕ ರಸ್ತೆ ಅಗತ್ಯವಾಗಿದೆ ಎಂದರು.
ಅರ್ಜುನ್ ಮಸ್ಕರೇನ್ಹಾಸ್, ಮೂಲಭೂತ ಸೌಲಭ್ಯವಾದ ಉತ್ತಮ ರಸ್ತೆ ಒದಗಿಸಲು ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಇವರಿಬ್ಬರು ಪ್ರತಿಭಟನೆಯೊಂದಿಗೆ " ರಸ್ತೆಗಳು ಗುಂಡಿ ಮುಕ್ತವಾಗಿರಲಿ" ಎಂಬ ಫಲಕಗಳನ್ನು ಹಾಕಿದ್ದು ಬೆಳಗ್ಗೆ ಆರಂಭವಾದ ಮೌನ ಪ್ರತಿಭಟನೆಯೂ ಸಂಜೆಯವರೆಗೆ ಮುಂದುವರಿಯಲಿದೆ.