ಕಾರ್ಕಳ, ಅ 12 (Daijiworld News/MSP): ಚಿಲಿಂಬಿಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಯಂತ್ರಣ ತಪ್ಪಿದ ಕೆಎಸ್ಆರ್ಟಿಸಿ ಬಸ್ಸು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಘಟನೆ ಶನಿವಾರ ಬೆಳಿಗ್ಗೆ ಸಂಭವಿಸಿದೆ.
ಮೈಸೂರು ವಿಭಾಗದ ಅಧೀನಕ್ಕೊಳಪಟ್ಟ ಕೆಎಸ್ಆರ್ಟಿಸಿ ಬಸ್ಸು ಮೈಸೂರಿನಿಂದ ಧರ್ಮಸ್ಥಳವಾಗಿ ಮೂಡಬಿದ್ರಿಗೆ ಸಾಗಿಬಂದು ಅಲ್ಲಿಂದ ಉಡುಪಿ ಕಡೆಗೆ ಹೋಗುತ್ತಿದ್ದಾಗ ಕಾರ್ಕಳದ ಚಿಲಿಂಬಿಯಲ್ಲಿ ಬಸ್ಸಿನ ಮುಂಬದಿಯ ಎಡಭಾಗದ ಟಯರ್ ಪಂಕ್ಚರ್ ಆಗಿತ್ತು. ಪರಿಣಾಮವಾಗಿ ನಿಯಂತ್ರಣ ತಪ್ಪಿತು. ಚಾಲಕನ ಸಮಯ ಪ್ರಜ್ಞೆಯಿಂದಾಗಿ ಸನ್ನಿಹದಲ್ಲಿ ಇದ್ದ ಮರಕ್ಕೆ ಡಿಕ್ಕಿ ಹೊಡೆಸಿರುವುದರಿಂದ ಭಾರೀ ಅನಾಹುತ ತಪ್ಪಿ. ಇಲ್ಲವಾಗಿದ್ದರೆ ಎದುರುಭಾಗದ ಭಾರೀ ಕಂದಕಕ್ಕೆ ಬಸ್ಸು ಉರುಳಿ ಬಿದ್ದು, ಹಲವು ಜೀವಗಳು ಹಾನಿಗೊಳಗಾಗುತ್ತಿತ್ತು ಎಂದು ಪ್ರಯಾಣಿಕರು ತಿಳಿಸಿದ್ದಾರೆ.
ಬಸ್ಸಿನ ಚಾಲಕ ಚಂದ್ರನಾಯಕ್ ಎಂಬವರು ಗಾಯಗೊಂಡಿದ್ದು, ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದಾರೆಂಬ ಮಾಹಿತಿ ಲಭಿಸಿದೆ.