ಭಟ್ಕಳ, ಅ 12 (Daijiworld News/MSP): ಇಲ್ಲಿನ ಅರಬ್ಬಿ ಸಮುದ್ರದಲ್ಲಿ ಶುಕ್ರವಾರ ಮುಳುಗುತ್ತಿದ್ದ ದೋಣಿಯನ್ನು ಇನ್ನೊಂದು ದೋಣಿಯ ಮೀನುಗಾರರೇ ರಕ್ಷಣೆ ಮಾಡಿದ್ದು, ಅದರಲ್ಲಿದ್ದ 28 ಮಂದಿ ಮೀನುಗಾರರು ಅಪಾಯದಿಂದ ಪಾರಾಗಿದ್ದಾರೆ.
ಸಮುದ್ರ ದಡದಿಂದ 25 ನಾಟಿಕಲ್ ಮೈಲು (46 ಕಿ.ಮೀ) ದೂರದ ಆಳ ಸಮುದ್ರದಲ್ಲಿ ಅವಘಡ ನಡೆದಿತ್ತು. ದೋಣಿಯು ಕುಂದಾಪುರ ತಾಲ್ಲೂಕಿನ ಗಂಗೊಳ್ಳಿ ಮಧುಕರ ಪೂಜಾರಿ ಎಂಬುವವರದ್ದಾಗಿದೆ. 'ಮೂಕಾಂಬಿಕಾ' ಹೆಸರಿನ ದೋಣಿಯಲ್ಲಿ ಭಟ್ಕಳ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದರು.
ದೋಣಿಯ ತಳಭಾಗ ಒಡೆದು ಮುಳುಗುವ ಹಂತ ತಲುಪಿದ್ದನ್ನು ಸಮೀಪದಲ್ಲೇ ಇದ್ದ ಇತರ ದೋಣಿಗಳ ಮೀನುಗಾರರು ಗಮನಿಸಿ, ಕೂಡಲೇ ರಕ್ಷಣೆಗೆ ಧಾವಿಸಿ ಕಾರ್ಯಾಚರಣೆ ಮಾಡಿದರು. ಸಂಜೆಯ ವೇಳೆಗೆ ದೋಣಿ ಎಳೆದು ದಡಕ್ಕೆ ತರಲಾಯಿತು ಎಂದು ಸ್ಥಳೀಯರಾದ ಶಂಕರ ಮೊಗೇರ್ ಮಾಹಿತಿ ನೀಡಿದರು.