ಕಾರ್ಕಳ, ಅ 11 (Daijiworld News/MSP): 'ಸಮಯ ಮುಗಿದೆ, ದೇವರೆ ನಾನು ಬರುತ್ತಿದ್ದೇನೆ' ಎಂದು ವ್ಯಾಟ್ಸಪ್ ಸ್ಟೇಟಸ್ ಅಪ್ಲೊಡ್ ಮಾಡಿ ವಿದ್ಯಾರ್ಥಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಶರಣಾದ ಘಟನೆ ತಾಲೂಕಿನ ನಲ್ಲೂರು ಗ್ರಾಮದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯನ್ನು ಕಾರ್ಕಳ ಎಂಪಿಎಂ ಕಾಲೇಜಿನ ಅಂತಿಮ ವರ್ಷದ ಬಿಎ ವಿದ್ಯಾರ್ಥಿ ನಲ್ಲೂರು ಗ್ರಾಮದ ಹರೀಶ್ (20) ಎಂದು ಗುರುತಿಸಲಾಗಿದೆ. ಹರೀಶ್ ಶುಕ್ರವಾರ ತರಗತಿಗೆ ಹಾಜರಾಗಿರಲಿಲ್ಲ ಎಂದು ತಿಳಿದುಬಂದಿದೆ. ಶುಕ್ರವಾರ ಮಧ್ಯಾಹ್ನ ತನ್ನ ಸ್ನೇಹಿತನೊಂದಿಗೆ ಹರೀಶ್ ಬೈಕ್ನಲ್ಲಿ ದೂಪದಕಟ್ಟೆಯತ್ತ ತೆರಳಿದ್ದನು. ಆದರೆ ಅತ್ತೂರು ಸಮೀಪಿಸುತ್ತಿದ್ದಂತೆ ಬೈಕ್ ನಿಲ್ಲಿಸುವಂತೆ ತಿಳಿಸಿ ಅಲ್ಲೇ ಇಳಿದು ಸ್ನೇಹಿತನಿಗೆ ಮುಂದುವರಿಯುವಂತೆ ತಿಳಿಸಿದ್ದಾನೆ.
ಆದರೆ ಸ್ನೇಹಿತ ಕೊಂಚ ದೂರ ಹೋಗಿ ಮರಳಿ ಬಂದಿದ್ದು, ಈ ವೇಳೆ ಹರೀಶ್ ರಸ್ತೆಯಲ್ಲಿ ಹೊರಳಾಡುತ್ತಿರುವುದು ಕಂಡುಬಂದಿದೆ. ಗಾಬರಿಗೊಂಡ ಸ್ನೇಹಿತ ತಕ್ಷಣ ಆತನನ್ನು ಉಡುಪಿ ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಬೆಳ್ಮಣ್ ತಲುಪುವಾಗ ಕೊನೆಯುಸಿರೆಳೆದಿದ್ದಾನೆ ಎನ್ನಲಾಗಿದೆ.
ಕಬ್ಬಡ್ಡಿ ಕ್ರೀಡೆಯಲ್ಲಿ ಸಕ್ರಿಯನಾಗಿದ್ದ ಹರೀಶ್ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ. ವಿಷ ಸೇವಿಸುವ ಮುನ್ನ," ಟೈಮ್ ಈಸ್ ಓವರ್, ಐ ಆ್ಯಮ್ ಕಮಿಂಗ್ ಗಾಡ್. ಜೀವನ ಅಂದ್ರೆ ಏನಂತ ಚೆನ್ನಾಗಿ ತಿಳಿದುಕೊಂಡೆ" ಎಂದು ಬರೆದುಕೊಂಡಿದ್ದಾನೆ.
ತಂದೆ ಜಗನ್ನಾಥ, ತಾಯಿ ಚಂಪಾ ಹಾಗೂ ಇಬ್ಬರು ಸಹೋದರರನ್ನು ಅಗಲಿದ್ದಾನೆ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.