ಮಂಗಳೂರು: ಕಾಗದ ಕೊರೆದು ಕಲೆ ಅರಳಿಸಬಲ್ಲ ಕರಾವಳಿಯ ಯುವಕನ 'ಎಕ್ಸ್ಕ್ಲೂಸಿವ್ ವರ್ಲ್ಡ್ ರೆಕಾರ್ಡ್ಸ್' ದಾಖಲೆ
Fri, Oct 11 2019 02:55:18 PM
ಮಂಗಳೂರು ಅ 11 (Daijiworld News/MSP): ಬಣ್ಣದ ಕುಂಚವನ್ನು ಹಿಡಿದು ,ಕ್ಯಾನ್ವಾಸ್ನಲ್ಲಿ ಕ್ಷಣ ಮಾತ್ರದಲ್ಲಿ ಮೂಡಿಸುವ ಚಿತ್ರವನ್ನೋ, ಲೋಹಗಳಲ್ಲಿ, ಬಟ್ಟೆಯಲ್ಲಿ, ರಂಗೋಲಿಯಲ್ಲಿ ಕಲೆಯನ್ನು ಅರಳಿಸುವ ಸೋಜಿಗವನ್ನು ನಾವು ನೋಡಿದ್ಡೇವೆ. ಆದರೆ ಇಲ್ಲೊಬ್ಬರಿದ್ದರೆ, ಕಾಗದವನ್ನು ಕೊರೆದು ಕಲೆ ಅರಳಸಿಬಲ್ಲ ಚಾಕಚಕ್ಯತೆ ಇವರ ಕೈಯಲ್ಲಿದೆ. ಇವರ ಈ ಕಲಾ ಸಾಧನೆಯೇ ಇವರ ಹೆಸರನ್ನು “ಎಕ್ಸ್ಕ್ಲೂಸಿವ್ ವರ್ಲ್ಡ್ ರೆಕಾರ್ಡ್ಸ್” ನಲ್ಲಿ ಸೇರಿಕೊಳ್ಳುವಂತೆ ಮಾಡಿದೆ.
ಇವರೇ ಕರಾವಳಿಯ ಯುವಕ ಪರೀಕ್ಷಿತ್ ನೆಲ್ಯಾಡಿ. ಉಳಿ ಹಿಡಿದ ಶಿಲ್ಪಿ ಕೈಯಲ್ಲಿ ವಿಗ್ರಹಗಳು ರೂಪ ತಾಳುವಂತೆ, ಇವರು ಸ್ಟೆನ್ಸಿಲ್ ಚಾಕು ಹಿಡಿದರೆ ಪೇಪರ್ ಗಳನ್ನೇ ಕೊರೆದು ( ಸ್ಟೆನ್ಸಿಲ್ ಕಟ್ ) ಕಲಾ ಪ್ರಪಂಚವೇ ಅರಳುವಂತೆ ಮಾಡುತ್ತಾರೆ.
ಇವರು ಕೇವಲ 3 ನಿಮಿಷ 12 ಸೆಕೆಂಡುಗಳ ಅವಧಿಯಲ್ಲಿ ಬಿಳಿ ಮತ್ತು ಕಪ್ಪು ಕಾಗದದ ಹಾಳೆ ಮತ್ತು ಕೊರೆಯಚ್ಚು ಚಾಕುವನ್ನು ಬಳಸಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವನ್ನು ಪೇಪರ್ ನಲ್ಲಿ ಮೂಡಿಸಿ, ತುಮಕೂರಿನಿಂದ ಚಂದನ್ ಸುರೇಶ್ ಮತ್ತು ಮಹಾರಾಷ್ಟ್ರದ ಹಿರಿಯ ಕಲಾವಿದರ ದಾಖಲೆಯನ್ನೇ ಲತಾ ಫೌಂಡೇಶನ್ ಪ್ರೋತ್ಸಾಹದೊಂದಿಗೆ ಮುರಿದು ದಾಖಲೆ ಬರೆದಿದ್ದಾರೆ.
ನೆಲ್ಯಾಡಿಯಿಂದ ಜ್ಞಾನೋದಯ ಬೆಥೆನಿ ಶಾಲೆ ಪ್ರಾಥಮಿಕ ಶಿಕ್ಷಣವನ್ನು ಪಡೆದ ಇವರು ಕಲಾ ತರಬೇತಿಯನ್ನು , ಮಂಗಳೂರಿನ ಶಕ್ತಿನಗರದ ಸ್ವರೂಪ ಅಧ್ಯಯನ ಕೇಂದ್ರದ ಪ್ರಸಿದ್ಧ ಕಲಾ ಶಿಕ್ಷಕ ಗೋಪಡ್ಕರ್ ಅವರಿಂದ ಪಡೆದಿದ್ದಾರೆ.
ಸ್ಟೆನ್ಸಿಲ್ ಕಟ್ ಕಲೆ ಮಾತ್ರವಲ್ಲದೆ, ಪರೀಕ್ಷಿತ್ ಅವರು ಬೆಂಕಿ ಬಳಸಿ ಮಾಡುವ ಫೈರ್ ಆರ್ಟ್ (ಬೆಂಕಿಯನ್ನೇ ಮಾಧ್ಯಮವಾಗಿ ಬಳಸಿ ಕಲಾಕೃತಿ) ನ್ನು ಕರಗತ ಮಾಡಿಕೊಂಡಿದ್ದಾರೆ. ಈ ಬಾರಿಯ ನಡೆದ ಮೈಸೂರು ದಸರಾ ಚಿತ್ರ ಸಂತೆಯಲ್ಲೂ ಭಾಗವಹಿಸಿದ್ದ ಪರೀಕ್ಷಿತ್ ಜಿಲ್ಲೆಯಾದ್ಯಂತ ಅನೇಕ ಪ್ರದರ್ಶನಗಳನ್ನು ನೀಡಿದ್ದಾರೆ.