ಉಡುಪಿ, ಅ 10 (Daijiworld News/MSP): ಕೃಷ್ಣ ಮಠದಲ್ಲಿ ಬೆಳಗ್ಗಿನ ಜಾವ ಸೂರ್ಯೋದಯಕ್ಕೂ ಮುನ್ನ ನಡೆಯುವ ಪಶ್ಚಿಮ ಜಾಗರ ಪೂಜೆ ಆಶ್ವಯುಜ ಮಾಸದ ಶುಕ್ಷಪಕ್ಷದ ಏಕಾದಶಿ ದಿನವಾದ ಬುಧವಾರ ಆರಂಭವಾಗಿದ್ದು, ಪರ್ಯಾಯ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ನೆರವೇರಿಸಿದರು.
ಆಷಾಢಶುದ್ಧ ಏಕಾದಶಿಯಿಂದ ಭಗವಂತ ಯೋಗನಿದ್ರೆಯಲ್ಲಿದ್ದಾನೆಂಬ ನಂಬಿಕೆ. ಈ ಒಂದು ತಿಂಗಳು ಬೆಳಗ್ಗೆ ಅಪೂರ್ವ ವಾದ್ಯಘೋಷ, ಬಳಿಕ ಪಶ್ಚಿಮಜಾಗರ ಪೂಜೆ ನಡೆಯುತ್ತದೆ. ಯೋಗನಿದ್ರೆಯಿಂದ ಭಗವಂತನನ್ನು ಎಚ್ಚರಿಸಲು ಭಕ್ತರು ಮಾಡುವ ಸೇವೆ ಇದು. ಜಾಗರ= ನಿದ್ರೆ, ಪಶ್ಚಿಮಜಾಗರ= ರಾತ್ರಿಯ ಕೊನೆಯ ಭಾಗ. ಈ ಆಚರಣೆಯನ್ನು ಮಧ್ವಾಚಾರ್ಯರು ವರಾಹಪುರಾಣದಿಂದ ಉಲ್ಲೇಖೀಸಿ ಚಾಲ್ತಿಗೆ ತಂದಿದ್ದಾರೆ ಎನ್ನುತ್ತಾರೆ ವಿದ್ವಾಂಸರು.
ಕೃಷ್ಣನಿಗೆ ನಿತ್ಯ 14 ಬಗೆಯ ಪೂಜೆಗಳೊಂದಿಗೆ ಬುಧವಾರದಿಂದ ಪಶ್ಚಿಮ ಜಾಗರ (ಜಾಗರಣೆ) ಪೂಜೆ ಸೇರ್ಪಡೆಗೊಂಡಿದ್ದು, ಇನ್ನು ಒಂದು ತಿಂಗಳು ನಿತ್ಯ 15 ಪೂಜೆ ನಡೆದು ಉತ್ಥಾನ ದ್ವಾದಶಿಯಂದು ಸಂಪನ್ನಗೊಳ್ಳಲಿದೆ.
ಬೆಳಗ್ಗೆ ನಿರ್ಮಾಲ್ಯ, ಉಷಃಕಾಲ, ಅಕ್ಷಯಪಾತ್ರೆ ಪೂಜೆ, ಪಂಚಾಮೃತ ಅಭಿಷೇಕದ ಬಳಿಕ ಪಶ್ಚಿಮ ಜಾಗರ ಪೂಜೆ ನಡೆಯಲಿದೆ. ಈ ಸಂದರ್ಭ ಕೃಷ್ಣ ಮಠದಲ್ಲಿ ಗರ್ಭಗುಡಿ ಮುಂಭಾಗ ಮತ್ತು ಸುತ್ತಲಿನ ದಳಿಗಳಲ್ಲಿ ದೀಪಗಳನ್ನು ಹಚ್ಚಲಾಗುತ್ತದೆ. ವಿಶೇಷವಾದ ಸೂರ್ಯವಾದ್ಯ ಮೊಳಗಿಸಲಾಗುತ್ತದೆ. ಪರ್ಯಾಯ ಶ್ರೀಗಳು ಮೊದಲಿಗೆ ಕೃಷ್ಣನಿಗೆ ಕೂರ್ಮಾರತಿ ಮಾಡಿ, ಬಳಿಕ ಅನುಕ್ರಮವಾಗಿ ಮುಖ್ಯಪ್ರಾಣ ದೇವರಿಗೆ, ಮಧ್ವಾಚಾರ್ಯರಿಗೆ, ಗರುಡ ದೇವರಿಗೆ ಆರತಿ ಬೆಳಗುತ್ತಾರೆ.
ನಂತರ ಉದ್ವರ್ತನ, ಕಳಶ, ತೀರ್ಥ, ಅಲಂಕಾರ, ಅವಸರ ಕನಕಾದಿ ಪೂಜೆ, ಮಹಾಪೂಜೆ ಜರುಗಲಿದೆ. ಸಾಯಂಕಾಲ ಚಾಮರ ಸೇವೆ, ರಾತ್ರಿಪೂಜೆ, ಅಷ್ಟಾವಧಾನ ಪೂಜೆ, ಶಯನೋತ್ಸವ ಯಥಾಪ್ರಕಾರ ನೆರವೇರಲಿದೆ.
ಚಾತುರ್ಮಾಸ್ಯ ಸಮಾಪನಕ್ಕೆ ಒಂದು ತಿಂಗಳು ಪೂರ್ವದಲ್ಲಿ ಕೈಗೊಳ್ಳುವ ಈ ವಿಶಿಷ್ಟ ಪೂಜೆಗೆ ಪಶ್ಚಿಮ ಜಾಗರ ಪೂಜೆ ಎಂದೂ ಕರೆಯುತ್ತಾರೆ. ಬ್ರಾಹ್ಮೀ ಮುಹೂರ್ತದಲ್ಲಿ ಪಕ್ಷಿಗಳು ಎಚ್ಚರಗೊಳ್ಳುವ ಸಮಯದಲ್ಲಿ ನಡೆಸುವ ಪೂಜೆಯಾಗಿರುವುದರಿಂದ ಈ ಹೆಸರಿದೆ.