ಬಂಟ್ವಾಳ, ಅ 09 (DaijiworldNews/SM): ಫರಂಗಿಪೇಟೆಯಲ್ಲಿ ನಡೆದಿದ್ದ ಡಬ್ಬಲ್ ಮರ್ಡರ್ ಪ್ರಕರಣದಲ್ಲಿ ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಪ್ರಮುಖ ಸೂತ್ರದಾರ ಆರೋಪಿಯೋರ್ವನನ್ನು ಬಂಟ್ವಾಳ ವೃತ್ತ ನಿರೀಕ್ಷಕ ಟಿ. ಡಿ.ನಾಗರಾಜ್ ಮತ್ತು ಗ್ರಾಮಾಂತರ ಎಸ್.ಐ.ಪ್ರಸನ್ನ ನೇತ್ರತ್ವದ ತಂಡ ಮಂಗಳೂರಿನ ಕಂಕನಾಡಿಯಲ್ಲಿ ಬಂಧಿಸಿದೆ. ಮಾರಿಪಳ್ಳ ನಿವಾಸಿ ಜಬ್ಬಾರ್ ಬಂಧಿತ ಆರೋಪಿ.
ಪ್ರಕರಣದ ಹಿನ್ನೆಲೆ:
2017 ಸೆ.25 ರಂದು ರಾತ್ರಿ ಸುಮಾರು 10.45 ರ ವೇಳೆ ಫರಂಗಿಪೇಟೆ ಹೋಟೇಲ್ ಒಂದರ ಮುಂಭಾಗದಲ್ಲಿ ನಡೆದ ಕಣ್ಣೂರಿನ ಜಿಯಾ ಗ್ಯಾಂಗ್ ಮತ್ತು ಮಾರಿಪಳ್ಳದ ಜಬ್ಬಾರ್ ಗ್ಯಾಂಗ್ ನಡುವಿನ ಗಲಾಟೆಯಲ್ಲಿ ಜಿಯಾ ಯಾನೆ ರಿಯಾಝ್ ಹಾಗೂ ಫಯಾಜ್ ಕೊಲೆಯಾಗಿದ್ದರು. ಉಳಿದಂತೆ ಜಿಯಾ ಗ್ಯಾಂಗ್ ನ ಕೆಲವರು ಗಾಯಗೊಂಡಿದ್ದರು. ಈ ಕೊಲೆಗೆ ಸಂಬಂಧಿಸಿದಂತೆ ಜಬ್ಬಾರ್ ಗ್ಯಾಂಗ್ ನ 12 ಮಂದಿಯನ್ನು ಪೋಲೀಸರು ಬಂಧಿಸಿದ್ದರು.
ಆದರೆ 13 ನೇ ಆರೋಪಿ ಹಾಗೂ ಈ ಕೊಲೆಗೆ ಪ್ರಮುಖ ಸೂತ್ರಾದಾರನಾಗಿದ್ದ ಜಬ್ಬಾರ ಪೋಲೀಸರ ಕಣ್ತಪ್ಪಿಸಿ ವಿದೇಶಕ್ಕೆ ಪರಾರಿಯಾಗಿದ್ದ. ಕಳೆದ ಎರಡು ವರ್ಷಗಳಿಂದ ಪೋಲೀಸರಿಗೆ ಸಿಗದೆ, ವಿದೇಶದಲ್ಲಿದ್ದ ಈತ ನೇಪಾಳದ ಮೂಲಕ ಭಾರತಕ್ಕೆ ಬಂದು ಕಂಕನಾಡಿಯಲ್ಲಿ ವಾಸವಾಗಿದ್ದ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಬಂಟ್ವಾಳ ವೃತ್ತ ನಿರೀಕ್ಷಕ ಟಿ. ಡಿ.ನಾಗರಾಜ್, ಗ್ರಾಮಾಂತರ ಎಸ್.ಪ್ರಸನ್ನ ಮತ್ತು ತಂಡ ಕಾರ್ಯಾಚರಣೆ ನಡೆಸಿ ಈತನನ್ನು ಬಂಧಿಸಿದ್ದಾರೆ.