ಮಂಗಳೂರು, ಅ 09 (Daijiworld News/MSP): ಮಂಗಳೂರು ಬಂದರು ಹಾಗೂ ವಿಮಾನ ನಿಲ್ದಾಣ ಖಾಸಗೀಕರಣಕ್ಕೆ ಕೇಂದ್ರ ಸರಕಾರ ಮುಂದಾಗಿರುವುದನ್ನು ತೀವ್ರವಾಗಿ ವಿರೋಧಿಸುವುದಾಗಿ ಮಾಜಿ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ಸರ್ಕ್ಯೂಟ್ ಹೌಸ್ ನಲ್ಲಿ ಅ. 09ರ ಬುಧವಾರ ಪತ್ರಿಕಾಗೋಷ್ಟಿ ನಡೆಸಿ ಅವರು ಮಾತನಾಡಿದರು. ಎನ್ ಎಂಪಿಟಿಯಲ್ಲಿ ಒಂದು ವಿಭಾಗದ ಕಂಟೇನರ್ ಗಳ ನಿರ್ವಹಣೆ ಚೆಟ್ಟಿನಾಡ್ ಸಂಸ್ಥೆ ನೀಡಲಾಗಿದೆ. ಇನ್ನು ಒಂದು ಭಾಗವನ್ನು ಇನ್ನೆರಡು ತಿಂಗಳಲ್ಲಿ ಜೆಎಸ್ ಡಬ್ಲ್ಯೂ ಸಂಸ್ಥೆಗೆ ನೀಡಲು ತೀರ್ಮಾನಿಸಲಾಗಿದೆ. ಎನ್ಎಂಪಿಟಿಯಲ್ಲಿ ಸುಮಾರು 40 ರಷ್ಟು ಶಿಪ್ಪಿಂಗ್ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಕೇಂದ್ರ ಸರ್ಕಾರದ ಖಾಸಗೀಕರಣ ನೀತಿಯಿಂದ ಈ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುಮಾರು ನಾಲ್ಕು ಸಾವಿರ ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದು ಅವರು ಹೇಳಿದರು.
ಈ ಸಂಬಂಧ ಸಂಸದರು ಜಿಲ್ಲೆಯ ಜನಪ್ರತಿನಿಧಿಗಳ ನಿಯೋಗವನ್ನು ಕೇಂದ್ರದ ಸಚಿವರ ಬಳಿ ಕೊಂಡೊಯ್ಯಬೇಕು. ಇಲ್ಲಿ ಉದ್ಯೋಗ ಕಳೆದುಕೊಳ್ಳುವವರಿಗೆ ಪ್ರಥಮ ಆದ್ಯತೆಯಡಿ ಉದ್ಯೋಗ ನೀಡುವ ಕೆಲಸವಾಗಬೇಕು ಜೊತೆಗೆ ನೇಮಕಾತಿ ಸಂದರ್ಭದಲ್ಲಿ ಶೇ.50 ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ರಾಜ್ಯ ಸರಕಾರ ವಿರುದ್ದ ಕಿಡಿಕಾರಿದ ಅವರು, ರಾಜ್ಯ ಸರ್ಕಾರ ಕಾಟಚಾರಕ್ಕೆ ಅಧಿವೇಶನ ಕರೆಯುತ್ತಿದೆ. 10 ದಿನಗಳ ಅಧಿವೇಶನ ಇದೀಗ 3 ದಿನಗಳಿಗೆ ಸೀಮಿತಗೊಂಡಿದ್ದು ನೆರೆ ಹಾಗೂ ಇತರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಸಮಯಾವಕಾಶ ಬೇಕಾಗಿದೆ, ಹೀಗಾಗಿ ಕೂಡಲೇ ಅಧಿವೇಶನದ ಅವಧಿಯನ್ನು ವಿಸ್ತರಿಸಬೇಕು ಎಂದು ಒತ್ತಾಯಿಸಿದರು.