ಕಾಸರಗೋಡು, ಅ 09 (Daijiworld News/MSP): ಮಂಜೇಶ್ವರದಲ್ಲಿ ಶಾಂತಿ ಕದಡಲು ಹುನ್ನಾರ ನಡೆಯುತ್ತಿದ್ದು, ಇಂತಹ ಶಕ್ತಿಗಳಿಗೆ ಉಪ ಚುನಾವಣೆ ಉತ್ತರ ನೀಡಲಿದೆ ಎಂದು ಕೇರಳ ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಹೇಳಿದರು.
ಮಂಜೇಶ್ವರ ಉಪಚುನಾವಣೆಯ ಪ್ರಚಾರಕ್ಕೆ ಆಗಮಿಸಿದ ಅವರು ಪತ್ರಿಕಾಗೋಷ್ಟಿ ನಡೆಸಿ ಮಾತನಾಡುತ್ತಿದ್ದರು. ಬಿಜೆಪಿ ಕರ್ನಾಟಕ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಉಪ್ಪಳದಲ್ಲಿ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಂದರ್ಭದಲ್ಲಿ ನೀಡಿದ ಹೇಳಿಕೆ ಯು ಮತೀಯ ಸೌಹಾರ್ದ ಕೆಡಿಸುವ ಉದ್ದೇಶವಾಗಿದೆ. ಧರ್ಮಗಳ ನಡುವೆ ಒಡಕು ಸೃಷ್ಟಿಸಿ ಮತಗಳಿಸುವ ತಂತ್ರ ಬಿಜೆಪಿಯದ್ದಾಗಿದೆ ಎಂದು ಅಭಿಪ್ರಾಯಪಟ್ಟರು.
ಮಂಜೇಶ್ವರದಲ್ಲಿ ಯು ಡಿ ಎಫ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ನಡೆಯುತ್ತಿದೆ. ಎಲ್ ಡಿ ಎಫ್ ಅಭ್ಯರ್ಥಿ ಮೂರನೇ ಸ್ಥಾನಕ್ಕಾಗಿ ಸ್ಪರ್ಧಿಸುತ್ತಿದೆ . ಬಿಜೆಪಿ ಅಭ್ಯರ್ಥಿ ಮತ್ತು ಎಲ್ ಡಿ ಎಫ್ ಅಭ್ಯರ್ಥಿ ನಡುವೆ ಒಂದೇ ಸಾಮ್ಯತೆ ಹೊಂದಿದ್ದು , ಮತದಾರರನ್ನು ತಪ್ಪು ದಾರಿಗೆಳೆಯುವ ಯತ್ನ ನಡೆಯುತ್ತಿದೆ ಎಂದರು.
ಶಬರಿಮಲೆ ದೇಗುಲ ಬಗ್ಗೆ ಮಂಜೇಶ್ವರದ ಎಲ್ ಡಿ ಎಫ್ ಅಭ್ಯರ್ಥಿ ಶಂಕರ ರೈ ರವರ ನಿಲುವು ಮತ್ತು ಮುಖ್ಯಮಂತ್ರಿಯವರ ನಿಲುವು ಒಂದೆಯೇ ಎಂದು ಪ್ರಶ್ನಿಸಿದ ಚೆನ್ನಿತ್ತಲ, ದ್ವಂದ್ವ ನಿಲುವಿನ ಬಗ್ಗೆ ಜನತೆಗೆ ಸ್ಪಷ್ಟನೆ ನೀಡಬೇಕು ಎಂದು ಹೇಳಿದರು.
೨೦೨೧ ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಯು ಡಿ ಎಫ್ ಅಧಿಕಾರಕ್ಕೆ ಬಂದರೆ ಶಬರಿಮಲೆ ಬಗ್ಗೆ ವಿಶೇಷ ಸುಗ್ರೀವಾಜ್ಞೆ ಜಾರಿಗೆ ತರಲಿದ್ದು , ಯು ಡಿ ಎಫ್ ಎಂದಿಗೂ ಭಕ್ತರ ಪರ ಎಂದು ಹೇಳಿದರು.