ಮಂಗಳೂರು ಜ 04: ಕಾಟಿಪಳ್ಳ ಸಮೀಪ ನಡೆದ ಹಿಂದೂ ಯುವಕನ ಹತ್ಯೆಗೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಅವರು ಕಮೀಷನರೇಟ್ ವ್ಯಾಪ್ತಿಯಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 35ರನ್ವಯ ಪ್ರತಿಬಂಧಕಾಜ್ಞೆ ಹೊರಡಿಸಿ ಆದೇಶಿಸಿದ್ದಾರೆ. ಜ. 3ರಂದು ರಾತ್ರಿ 10 ಗಂಟೆಯಿಂದ ಜ. 4ರಂದು ರಾತ್ರಿ 10 ಗಂಟೆಯವರೆಗೆ ಪ್ರತಿಬಂಧಕಾಜ್ಞೆ ಹೊರಡಿಸಿ ಆದೇಶ ನೀಡಿದ್ದಾರೆ. ಅದರಂತೆ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಮೆರವಣಿಗೆ, ಪ್ರತಿಭಟನೆ, ಜಾಥಾ, ಧರಣಿ, ಮುಷ್ಕರ, ರಾಸ್ತಾ ರೋಕೊ, ಮುತ್ತಿಗೆ ಮೊದಲಾದವುಗಳನ್ನು ನಿರ್ಬಂಧಿಸಿ ಆದೇಶಿಸಿದ್ದಾರೆ. ಕಮಿಷನರೇಟ್ ವ್ಯಾಪ್ತಿಗೆ ಬರುವ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಬರುವಂತಹ ಘಟನೆಗಳು ಮರುಕಳಿಸದಂತೆ ತಡೆಗಟ್ಟುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತರ ಪ್ರಕಟಣೆ ತಿಳಿಸಿದೆ.
ಇನ್ನು ದೀಪಕ್ ಹತ್ಯೆ ಖಂಡಿಸಿ ಜಿಲ್ಲೆಯಾದ್ಯಂತ ಅಲ್ಲಲ್ಲಿ ಪ್ರತಿಭಟನೆ ನಡೆಯಿತು. ಘಟನೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ಸಂಪ್ಯ ಠಾಣಾ ಮುಂಭಾಗ ಜಮಾಯಿಸಿ ಪ್ರತಿಭಟನೆ ನಡೆಸಿದರು. ಜಿಲ್ಲೆಯಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ಕೊಲೆ ಪ್ರಕರಣಗಳು ಹೆಚ್ಚಾಗುತ್ತಿದ್ದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು. ಪ್ರತಿಭಟನೆಯ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ತಾಲೂಕು ಮಂಡಲ ಪಂಚಾಯತ್ ಅಧ್ಯಕ್ಷ ಚನಿಲ, ತಿಮ್ಮಪ್ಪ ಶೆಟ್ಟಿ ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಇದಲ್ಲದೆ ಸಂತೋಷ್ ಕುಮಾರ್ ರೈ ಬೋಳಿಯಾರ್ ಅವರ ನೇತೃತ್ವದಲ್ಲಿ ತೊಕ್ಕೊಟ್ಟಿನಲ್ಲಿ, ಹಿಂದೂ ಸಂಘಟನೆ ಕಾರ್ಯಕರ್ತರು ಬಿ ಸಿ ರೋಡ್ ನಲ್ಲಿ, ಕಡಬದಲ್ಲೂ ಪ್ರತಿಭಟನೆ ನಡೆಯಿತು.