ಮಂಗಳೂರು, ಅ 08 (DaijiworldNews/SM): ಇತಿಹಾಸ ಪ್ರಸಿದ್ಧ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಕಳೆದ 9 ದಿನಗಳಿಂದ ಅದ್ದೂರಿಯಾಗಿ ನಡೆದ ನವರಾತ್ರಿ ಉತ್ಸವ ಸಮಾಪನಗೊಳ್ಳುತ್ತಿದೆ. ಮಂಗಳವಾರ ಸಂಜೆ ಕ್ಷೇತ್ರದಿಂದ ಶಾರದೆ, ಗಣಪತಿ ಸೇರಿದಂತೆ ನವದುರ್ಗೆಯರ ವಿಗ್ರಹಗಳ ವರ್ಣರಂಜಿತ ಮೆರವಣಿಗೆ ನಡೆಯುತ್ತಿದೆ.
ಶಾರದಾ ಮಾತೆ, ಮಹಾಗಣಪತಿ, ನವದುರ್ಗೆಯರ ಅದ್ದೂರಿ ಮೆರವಣಿಗೆ ಮೂಲಕ ಮಂಗಳೂರು ದಸರಾದ ವೈಭವದ ಮೆರವಣಿಗೆ ಸಂಜೆ ಆರಂಭಗೊಂಡಿತು. ನಗರದ ಪ್ರಮುಖ ಬೀದಿಗಳಲ್ಲಿ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿರುವ ಮಾರ್ಗಗಳಲ್ಲಿ ಮೆರವಣಿಗೆ ಸಾಗಿ ಬಂರುತ್ತಿದೆ. ದೇಶವಿದೇಶದ ನೂರಾರು ಮಂದಿ ಭಕ್ತಾದಿಗಳು ದೇವರ ಮೆರವಣಿಗೆಯನ್ನು ಕಣ್ತುಂಬಿಕೊಳುತ್ತಿದ್ದಾರೆ.
ಇಂದು ಬೆಳಿಗ್ಗೆ ಕುದ್ರೋಳಿ ಕ್ಷೇತ್ರದಲ್ಲಿ ಬೆಳಿಗ್ಗೆ 10 ಗಂಟೆಗೆ ವಾಗೀಶ್ವರಿ ದುರ್ಗಾಹೋಮ, ಮಧ್ಯಾಹ್ನ 1ಕ್ಕೆ ಶಿವಪೂಜೆ, ಶ್ರೀ ದೇವಿ ಪುಷ್ಪಾಲಂಕಾರ ಮಹಾಪೂಜೆ, ಉತ್ಸವ ನಡೆಯಿತು. ಸಂಜೆ 4 ಗಂಟೆಗೆ ಕ್ಷೇತ್ರದ ಅಭಿವೃದ್ಧಿ ರೂವಾರಿ ಬಿ ಜನಾರ್ದನ ಪೂಜಾರಿ ಅವರ ನೇತೃತ್ವದಲ್ಲಿ ಮಂಗಳೂರು ದಸರಾದ ವೈಭವದ ಮೆರವಣಿಗೆ, ಶ್ರೀ ಶಾರದಾ ಮಾತೆಯ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು.
ನೂರಕ್ಕೂ ಅಧಿಕ ವಿವಿಧ ಬಗೆಯ ಟ್ಯಾಬ್ಲೋಗಳು, ಭಜನಾ ತಂಡಗಳು, ತಟೀರಾಯ, ಕೊಂಬು, ಕಹಳೆ, ಚೆಂಡೆ, ಡೋಲುಕುಣಿತ, ಕಲ್ಲಡ್ಕ ಗೊಂಬೆ ಬಳಗ ಇತ್ಯಾದಿ ಮೆರವಣಿಗೆಯ ಮೆರುಗನ್ನು ಹೆಚ್ಚಿಸಿದವು.
ಇನ್ನು ಈ ಬಾರಿಯ ಮೆರವಣಿಗೆಗೆಯಲ್ಲಿ ಒಂದಿಷ್ಟು ಬದಲಾವಣೆ ಮಾಡಲಾಗಿತ್ತು. ಆರಂಭದಲ್ಲಿ ನವದುರ್ಗೆಯರ ವಿಗ್ರಹಗಳ ಶೋಭಾಯಾತ್ರೆಯ ಬಳಿಕ ಟ್ಯಾಬ್ಲೊಗಳಿಗೆ ವ್ಯವಸ್ಥೆ ಮಾಡಲಾಗಿತ್ತು.