ಕಾಸರಗೋಡು, ಅ 08 (Daijiworld News/MSP): ಮಂಜೇಶ್ವರ ವಿಧಾನಸಭಾ ಕ್ಷೇತ್ರ ಎಲ್ಲರ ಕುತೂಹಲದ ಕೇಂದ್ರ ಬಿಂದುವಾಗುತ್ತಿದೆ. 2016 ರಲ್ಲಿ ಬಿಜೆಪಿ ಕೇವಲ 89 ಮತಗಳ ಅಂತರದಿಂದ ಪರಾಭಗೊಂಡ ಈ ಕ್ಷೇತ್ರದಲ್ಲಿ ಶಾಸಕರಾಗಿದ್ದ ಮುಸ್ಲಿಂ ಲೀಗ್ ನ ಪಿ . ಬಿ ಅಬ್ದುಲ್ ರಜಾಕ್ ರವರ ನಿಧನದಿಂದ ಉಪಚುನಾವಣೆಗೆ ಸಜ್ಜಾಗುತ್ತಿದೆ.
https://daijiworld.ap-south-1.linodeobjects.com/iWeb/tvdaijiworld/img_tv247/msp-290919-manjes.jpg">
ಕಾಂಗ್ರೆಸ್ ನೇತೃತ್ವದ ಯುಡಿಎಫ್ , ಸಿಪಿಐಎಂ ನೇತೃತ್ವದ ಎಲ್ ಡಿಎಫ್ ಮತ್ತು ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗುತ್ತಿರುವ ಈ ಕ್ಷೇತ್ರದಲ್ಲಿ ಹೇಗಾದರೂ ಮಾಡಿ ಗೆಲ್ಲಬೇಕೆಂಬ ಪಣತೊಟ್ಟಿರುವ ಮೂರು ಪಕ್ಷಗಳು ತನ್ನದೇ ತಂತ್ರಗಾರಿಯಲ್ಲಿ ತೊಡಗಿದೆ. ರಾಷ್ಟ್ರ , ರಾಜ್ಯಮಟ್ಟದ ನಾಯಕರನನ್ನು ಕರೆಸಿ ಮತದಾರರನ್ನು ಸೆಳೆಯುವ ಎಲ್ಲಾ ಕಸರತ್ತು ಮಾಡುತ್ತಿದೆ. ಮೂರು ಅಭ್ಯರ್ಥಿಗಳು ಈಗಾಗಲೇ ಕ್ಷೇತ್ರದಾದ್ಯಂತ ಒಂದು ಸುತ್ತಿನ ಪ್ರಚಾರ ಕಾರ್ಯ ಮುಗಿಸಿದ್ದು , ಎರಡನೇ ಹಂತದ ಪ್ರಚಾರದಲ್ಲಿ ಮಗ್ನರಾಗಿದ್ದಾರೆ.
ಯುಡಿಎಫ್ ನ ಎಂ .ಸಿ ಖಮರುದ್ದೀನ್ ಮತ್ತು ಎಲ್ ಡಿ ಎಫ್ ನ ಎಂ .ಶಂಕರ ರೈ ಮೊದಲ ಬಾರಿಗೆ ವಿಧಾನಸಭೆಗೆ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿಯ ಕುಂಟಾರು ರವೀಶ ತಂತ್ರಿ ೨೦೧೬ ರಲ್ಲಿ ಕಾಸರಗೋಡು ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದು, ಸೋಲು ಕಂಡಿದ್ದರು. ಆದರೆ ಮಂಜೇಶ್ವರಕ್ಕೆ ಮೂವರು ಹೊಸಮುಖಗಳನ್ನೇ ಕಣಕ್ಕಿಸಲಾಗಿದೆ. ಯು ಡಿ ಎಫ್ ಪರವಾಗಿ ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಮಂಗಳವಾರ ಮತ್ತು ಬುಧವಾರ ಮಂಜೇಶ್ವರ ವಿವಿಧೆಡೆ ಪ್ರಚಾರ ಕಾರ್ಯ ನಡೆಸಲಿದ್ದು , ಮಂಗಳವಾರ ಕುಂಬಳೆ , ಮಂಗಲ್ಪಾಡಿ ,ವರ್ಕಾಡಿ, ಮಂಜೇಶ್ವರ ಹಾಗೂ ಇತರೆಡೆಗಳಲ್ಲಿ ಕುಟುಂಬ ಸಂಗಮ ದಲ್ಲಿ ಪಾಲ್ಗೊಂಡರು.
ಬುಧವಾರ ಮೀ೦ಜ, ಮಂಗಲ್ಪಾಡಿ ಪೈವಳಿಕೆ ಎಣ್ಮಕಜೆ ಮೊದಲಾದ ಗ್ರಾಮ ಪಂಚಾಯತ್ ಗಳಲ್ಲಿ ಪ್ರಚಾರ ನಡೆಸುವರು. ಮಂಗಳವಾರ ಉಪ್ಪಳದಲ್ಲಿ 'ಯೂತ್ ಫೋರ್ ಎಂ .ಸಿ ' ಎಂಬ ಕಾರ್ಯಕ್ರಮ ನಡೆಯಿತು.ಮುಂದಿನ ದಿನಗಳಲ್ಲಿ ಯು ಡಿ ಎಫ್ ನ ರಾಜ್ಯ , ರಾಷ್ಟ್ರ ಮುಖಂಡರು ಮಂಜೇಶ್ವರಕ್ಕೆ ತಲಪಿ ಪ್ರಚಾರಕ್ಕೆ ಬಿರುಸು ನೀಡುವರು. ಕೆಪಿಸಿಸಿ ಅಧ್ಯಕ್ಷ ಮುಲ್ಲ ಪಳ್ಳಿ ರಾಮಚಂದ್ರನ್ ಈಗಾಗಲೇ ಪ್ರಚಾರ ನಡೆಸಿದ್ದಾರೆ . ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ನೇತೃತ್ವದಲ್ಲಿ ಚುನಾವಣಾ ಪ್ರಚಾರ ತಂತ್ರಗಾರಿಕೆ ನಡೆಯುತ್ತಿದೆ .
ಎಲ್ ಡಿ ಎಫ್ ಎರಡನೇ ಸುತ್ತಿನ ಪ್ರಚಾರದಲ್ಲಿ ಮಗ್ನವಾಗಿದ್ದು ಮನೆ ಮನೆ ಭೇಟಿ ನೀಡಿ ಮತದಾರರನ್ನು ಸೆಳೆಯುವ ಪ್ರಯತ್ನ ನಡೆಯುತ್ತಿದೆ . ಈಗಾಗಲೇ ಸ್ಥಳೀಯ ಮಟ್ಟದ ಸಮಾವೇಶ ನಡೆಸಿ ಪ್ರಚಾರಕ್ಕೆ ರೂಪು ನೀಡಿದೆ .ಮುಖ್ಯಮಂತ್ರಿ ಪಿಣರಾಯಿ ವಿಜಯನ್ 12 ರಂದು ಮಂಜೇಶ್ವರಕ್ಕೆ ಆಗಮಿಸಲಿದ್ದು , ಇದರೊಂದಿಗೆ ಪ್ರಚಾರ ತಾರಕ್ಕೇರಲಿದೆ.ರಾಜ್ಯದ ಏಳು ಸಚಿವರು 12ರಿಂದ ಜಿಲ್ಲೆಯ ಹಲವೆಡೆ ಪ್ರಚಾರ ನಡೆಸುವರು. ಸಿಪಿಎಂ ಸೇರಿದಂತೆ ಎಲ್ ಡಿ ಎಫ್ ನ ಘಟಾನುಘಟಿ ನಾಯಕರು ಮುಂದಿನ ದಿನಗಳಲ್ಲಿ ಮಂಜೇಶ್ವರಕ್ಕೆ ಆಗಮಿಸಿ ಮತ ಯಾಚನೆ ನಡೆಸುವರು.
ಬಿಜೆಪಿ ಗೆಲುವಿಗಾಗಿ ಎಲ್ಲಾ ರೀತಿಯ ಕಸರತ್ತು ನಡೆಸುತ್ತಿದೆ. ಪಕ್ಷದ ಘಟಾನುಘಟಿ ನಾಯಕರನ್ನು ಕರೆಸಿ ಮತದಾರರನ್ನು ನೇರವಾಗಿ ಭೇಟಿ ಮಾಡುವ ಯತ್ನ ನಡೆಸುತ್ತಿದೆ. ಕೇಂದ್ರ ಸಚಿವ ಡಿ . ವಿ ಸದಾನಂದ ಗೌಡ , ಕರ್ನಾಟಕ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ರಾಜ್ಯ ಮುಖಂಡರು ಪ್ರಚಾರ ನಡೆಸಿದ್ದಾರೆ . ಬಿಜೆಪಿ ರಾಜ್ಯ ಅಧ್ಯಕ್ಷ ಪಿ .ಎಸ್ ಶ್ರೀಧರನ್ ಪಿಳ್ಳೆ ಬುಧವಾರ ಪ್ರಚಾರಕ್ಕೆ ಚಾಲನೆ ನೀಡುವರು.
ಸ್ಥಳೀಯ ವಿಷಯಗಳಲ್ಲದೆ ರಾಷ್ಟೀಯ ಮಟ್ಟದ ವಿಷಯಗಳು ಪ್ರಚಾರ ವಸ್ತುಗಳಾಗುತ್ತಿವೆ . ಒಂದೆಡೆ ಶಬರಿಮಲೆ , ಇನ್ನೊಂದೆಡೆ ಕೇಂದ್ರ ಸರಕಾರದ ವೈಫಲ್ಯ ಸಾಧನೆ ಇದರ ಜೊತೆಗೆ ಕಾಸರಗೋಡು ತಲಪಾಡಿ ನಡುವಿನ ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆ ಮೂರು ಪಕ್ಷಗಳಿಗೆ ಚುನಾವಣಾ ಅಸ್ತ್ರವಾಗಿ ಪರಿಣಮಿಸಿದೆ . ಉಪಚುನಾವಣೆ ರಾಷ್ಟ್ರ ಮಟ್ಟದಲ್ಲೇ ಗಮನಸೆಳೆಯುವಂತೆ ಮಾಡಿದೆ