ಭಟ್ಕಳ, ಅ 8 (Daijiworld News/RD): ಭಟ್ಕಳದ ಶಂಕಿತ ಭಯೋತ್ಪಾದಕ ಉಗ್ರ ಡಾ. ಸಯ್ಯದ್ ಇಸ್ಮಾಯಿಲ್ ಅಫಾಕ್ ಲಂಕಾನ ಪತ್ನಿ ಪಾಕಿಸ್ತಾನಕ್ಕೆ ಮರಳಿದ್ದಾರೆ.
ಭಟ್ಕಳದಲ್ಲಿ ಹೋಮಿಯೋಪಥಿ ವೈದ್ಯನಾಗಿದ್ದ ಶಂಕಿತ ಉಗ್ರ ಡಾ. ಸಯ್ಯದ್ ಇಸ್ಮಾಯಿಲ್ ಅಫಾಕ್ ಲಂಕಾನ ಪತ್ನಿ ಅರ್ಸಲಾ ಅಬೀರಾಳನ್ನು ಪಾಕಿಸ್ತಾನಕ್ಕೆ ಕಳುಹಿಸಲಾಗಿದೆ. ಗಂಡ-ಹೆಂಡತಿಯ ಖಾತೆಗೆ ಪಾಕಿಸ್ತಾನದ ಕೆಲವು ನಿಷೇಧಿತ ಸಂಘಟನೆಗಳು ಹಣ ವರ್ಗಾವಣೆ ಮಾಡಿದ್ದವು.
ಈ ಹಿನ್ನೆಲೆಯಲ್ಲಿ ಅರ್ಸಲಾಳನ್ನು ಕೂಡ ಸಿಸಿಬಿ ಪೊಲೀಸರು ತನಿಖೆ ನಡೆಸಿದ್ದರು. ದೇಶದ ಭದ್ರತಾ ದೃಷ್ಟಿಯಿಂದ ಕೇಂದ್ರ ಗೃಹ ಇಲಾಖೆ ಈಕೆಯ ವೀಸಾವನ್ನು ರದ್ದುಪಡಿಸಿ, ಮೂರು ತಿಂಗಳಲ್ಲಿ ದೇಶ ತೊರೆಯುವಂತೆ ಉತ್ತರ ಕನ್ನಡ ಪೊಲೀಸ್ ಇಲಾಖೆಯ ಮೂಲಕ ಆಗಸ್ಟ್ ನಲ್ಲಿ ನೋಟಿಸ್ ಜಾರಿ ಮಾಡಿತ್ತು. ಇದೀಗ ಆಕೆಯನ್ನು ಪಾಕಿಸ್ತಾನಕ್ಕೆ ಮರಳಿ ಕಳುಹಿಸಲಾಗಿದೆ.
ಭಟ್ಕಳ ಮೂಲದ ಅಫಾಕ್ ಲಂಕಾ 2006ರಲ್ಲಿ ಪಾಕಿಸ್ತಾನದ ಅರ್ಸಲಾಳನ್ನು ದುಬೈನಲ್ಲಿ ವಿವಾಹವಾಗಿದ್ದ. ಪಂಜಾಬ್ನ ಅತ್ತಾರಿ ಗಡಿ ಮೂಲಕ ಆಕೆ ಭಾರತ ಪ್ರವೇಶಿಸಿದ್ದಳು. ಮೊದಲು ಪ್ರವಾಸಿ ವೀಸಾದ ಮೇಲೆ ಭಟ್ಕಳದಲ್ಲಿದ್ದ ಈಕೆ, ನಂತರ ವೀಸಾ ಅವಧಿ ವಿಸ್ತರಿಸಿಕೊಂಡಿದ್ದಳು. ಆದರೆ ಮೂರು ತಿಂಗಳ ಹಿಂದೆ ಈ ವೀಸಾವನ್ನು ಗೃಹ ಇಲಾಖೆ ರದ್ದುಪಡಿಸಿತ್ತು.