ಕಾಸರಗೋಡು, ಅ 04 (Daijiworld News/MSP): ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಅಭಿವೃದ್ಧಿ ಜೊತೆ ಶಬರಿಮಲೆ ದೇಗುಲ ಹಾಗೂ ಪೆರಿಯದ ಯುವ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊಲೆ ಸೇರಿದಂತೆ ಸಿಪಿಎಂನ ಹಿಂಸಾತ್ಮಕ ರಾಜಕೀಯ ಪ್ರಚಾರ ವಿಷಯವಾಗಲಿದೆ ಎಂದು ಕೇರಳ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಮುಲ್ಲಪಳ್ಳಿ ರಾಮಚಂದ್ರನ್ ಹೇಳಿದರು. ಉಪಚುನಾವಣೆ ಪ್ರಚಾರಕ್ಕೆ ಆಗಮಿಸಿದ ಅವರು ಉಪ್ಪಳದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಉಪಚುನಾವಣೆಯಲ್ಲಿ ಸಿಪಿಎಂ ಮತ್ತು ಬಿಜೆಪಿ ನಡುವೆ ರಹಸ್ಯ ಒಪ್ಪಂದ ಮಾಡಲಾಗಿದೆ. ಬಿಜೆಪಿ ಅಭ್ಯರ್ಥಿ ಕುಂಟಾರು ರವೀಶ ತಂತ್ರಿಯವರಿಂದ ಆಶೀರ್ವಾದ ಪಡೆದು ಸಿಪಿಎಂ ಅಭ್ಯರ್ಥಿ ಶಂಕರ ರೈ ಪ್ರಚಾರಕಾರ್ಯ ಆರಂಭಿಸಿರುವುದು ಸಾಕ್ಷಿ ಎಂದು ಹೇಳಿದರು.
ಶಬರಿಮಲೆ ದೇಗುಲಕ್ಕೆ ಯುವತಿ ಪ್ರವೇಶಕ್ಕೆ ಸಂಬಂಧಪಟ್ಟಂತೆ ಸಿಪಿಎಂ ಅಭ್ಯರ್ಥಿ ಶಂಕರ ರೈ ನೀಡಿರುವ ಹೇಳಿಕೆಗೆ ರಾಜ್ಯ ಸರಕಾರ ಬದ್ದವಾಗಿದೆಯೇ ಎಂದು ಸ್ಪಷ್ಟಪಡಿಸಬೇಕು. ಯುವತಿ ಪ್ರವೇಶ ಬೆಂಬಲಿಸುತ್ತಿರುವ ರಾಜ್ಯ ಸರಕಾರ ತಮ್ಮದೇ ಪಕ್ಷದ ಅಭ್ಯರ್ಥಿ ನೀಡಿರುವ ತದ್ವಿರುದ್ದ ಹೇಳಿಕೆ ಒಪ್ಪಲು ಸಾಧ್ಯವೇ ಎಂದು ಪ್ರಶ್ನಿಸಿದ ಮುಲ್ಲಪಳ್ಳಿರವರು, ಶಂಕರ ರೈಯವರು ಸಂಘ ಪರಿವಾರದ ಮುಖವಾಡ ಧರಿಸಿದ ಸಿಪಿಎಂ ಅಭ್ಯರ್ಥಿ ಎಂದು ಅಭಿಪ್ರಾಯಪಟ್ಟರು.
ಯುವ ಕಾಂಗ್ರೆಸ್ ಕಾರ್ಯಕರ್ತರಾದ ಕೃಪೇಶ್ ಮತ್ತು ಶರತ್ ಲಾಲ್ ಕೊಲೆ ಪ್ರಕರಣ ಚುನಾವಣಾ ವಿಷಯವಾಗಲಿದೆ. ಪ್ರಕರಣದ ಆರೋಪಿಗಳನ್ನು ರಕ್ಷಿಸಲು ಹುನ್ನಾರ ನಡೆಸಲಾಗಿದೆ. ಸಿಪಿಎಂನ ಅಣತಿಯಂತೆ ಪೊಲೀಸರು ತನಿಖೆ ನಡೆಸಿದ್ದಾರೆ . ಪ್ರಕರಣ ಸಿಬಿಐಗೆ ವಹಿಸಿರುವುದರಿಂದ ಷಡ್ಯಂತ್ರ ಹೊರಬರಲಿದೆ. ಈ ಹಿಂದೆ ತನಿಖೆ ನಡೆಸಿದ ಪೊಲೀಸ್ ಅಧಿಕಾರಿಗಳನ್ನು ತನಿಖೆಗೊಳಪಡಿಸಬೇಕು. ಎಂದು ಹೇಳಿದರು.