ಮಂಗಳೂರು, ಅ 04 (Daijiworld News/MSP): ನೀವು ಪ್ರಯಾಣಿಸುವ ಬಸ್ಸಿನಲ್ಲಿ ಕಂಡೆಕ್ಟರ್ ಟಿಕೆಟ್ ನೀಡದಿದ್ದರೆ, ನೀವು ಉಚಿತವಾಗಿ ಪ್ರಯಾಣಿಸಬಹುದು. ಹೌದು ಹೀಗೊಂದು ಸೂಚನೆಯನ್ನು ಪೊಲೀಸ್ ಆಯುಕ್ತ ಡಾ. ಹರ್ಷ ನೀಡಿದ್ದಾರೆ.
ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಬಂದ ದೂರಿನ ಮೇರೆಗೆ ಸ್ಪಂದಿಸಿದ ಆಯುಕ್ತರು ಈ ಸೂಚನೆ ನೀಡಿದರು. ಟಿಕೆಟ್ ನೀಡದಿದ್ದರೆ ಪ್ರಯಾಣಿಕರು ಬಸ್ಸಿನಲ್ಲಿ ಉಚಿತವಾಗಿ ಸಂಚರಿಸಬಹುದು. ಒಂದು ವೇಳೆ ಈ ಸಂದರ್ಭ ನಿರ್ವಾಹಕರು ಕಿರಿಕ್ ಮಾಡಿದ್ರೆ, ಬಸ್ಸು ಮಾಲಕರ ಸಂಘದ ಮುಖ್ಯಸ್ಥರ ವಾಟ್ಸಾಪ್ ನಂಬರಿಗೆ ಬಸ್ಸಿನ ನಂಬರ್ ಎಲ್ಲಾ ಮಾಹಿತಿ ಸೇರಿ ದೂರು ಸಲ್ಲಿಸಿ ಎಂದು ಪೊಲೀಸ್ ಆಯುಕ್ತ ಡಾ. ಹರ್ಷ ಹೇಳಿದ್ದಾರೆ.
ಯಾವುದೇ ಕಾರಣಕ್ಕೂ ಕಂಡೆಕ್ಟರ್ ಟಿಕೆಟ್ ನೀಡದೆ ಪ್ರಯಾಣ ದರ ಪಡೆಯುವಂತಿಲ್ಲ. ಹೀಗಾಗಿ ಪ್ರಯಾಣಿಕರು ಕೂಡಾ ಟಿಕೆಟ್ ಪಡೆದ ನಂತರವೇ ಪ್ರಯಾಣ ದರ ಪಡೆಯಬೇಕು. ಇಷ್ಟಾಗಿಯೂ ಕಂಡೆಕ್ಟರ್ ಟಿಕೆಟ್ ಕೊಡದಿದ್ದರೆ ಅಥವಾ ಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡಿದರೆ 7996999977 ಮೊಬೈಲ್ ಸಂಖ್ಯೆಗೆ ವಾಟ್ಸಾಪ್ ಮೂಲಕ ದೂರು ನೀಡಿ. ಈ ಬಗ್ಗೆ ಸಂಘದ ಮುಖ್ಯಸ್ಥರು ಸಂಬಂಧಪಟ್ಟ ಕಂಡೆಕ್ಟರ್ ಹಾಗೂ ಬಸ್ಸಿನ ಮಾಲಕರ ವಿರುದ್ದ ಸೂಕ್ತ ಕ್ರಮವನ್ನು ಕೈಗೊಳ್ಳುವರು ಎಂದು ಹೇಳಿದ್ದಾರೆ.