ಬಂಟ್ವಾಳ, ಅ 03 (Daijiworld News/MSP): ಖಾಸಗಿ ನ್ಯೂಸ್ ಚಾನೆಲ್ ಒಂದರ ಕ್ಯಾಮರಾಮೆನ್ ಎಂದು ಹೇಳಿಕೊಂಡು ಶಿಕ್ಷಣ ಸಂಸ್ಥೆಯೊಂದನ್ನು ಬ್ಲ್ಯಾಕ್ ಮೇಲ್ ಮಾಡಿ 50 ಸಾವಿರ ಚೆಕ್ ಪಡೆದ ನಕಲಿ ಪತ್ರಕರ್ತನ ವಿರುದ್ದ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಂಟ್ವಾಳದ ಎಸ್.ವಿ.ಎಸ್ ಆಂಗ್ಲಮಾಧ್ಯಮ ಶಾಲೆಯ ವಿವಾದವೊಂದಕ್ಕೆ ಸಂಬಂಧಿಸಿ ಸಿದ್ದಕಟ್ಟೆ ನಿವಾಸಿ ಅಶೋಕ್ ಹಲಾಯಿ ಎಂಬಾತ ತಾನು ಖಾಸಗಿ ನ್ಯೂಸ್ ಚಾನೆಲ್ ಒಂದರ ಕ್ಯಾಮರಾಮೆನ್ ಎಂದು ಹೇಳಿಕೊಂಡು ಅ.3 ರ ಗುರುವಾರ ಎಸ್.ವಿ.ಎಸ್ ಶಿಕ್ಷಣ ಸಂಸ್ಥೆಗೆ ಸಂಬಂಧಿಸಿದ ಸುದ್ದಿ ಪ್ರಸಾರವಾಗದಂತೆ ಮಾಡಲು ತನಗೆ 50 ಸಾವಿರ ನೀಡುವಂತೆ ಬೇಡಿಕೆ ಇಟ್ಟಿದ್ದ.
ಸಂಸ್ಥೆಯ ಆಡಳಿತ ಮಂಡಳಿಯವರು ಆತನ ಬ್ಲ್ಯಾಕ್ ಮೇಲ್ ಗೆ ಮಣಿದು 50 ಸಾವಿರದ ಚೆಕ್ ನೀಡಿದ್ದಾರೆ. ಆ ಬಳಿಕ ಶಿಕ್ಷಣ ಸಂಸ್ಥೆಯವರು ಅದೇ ಖಾಸಗಿ ಚಾನೆಲ್ ನ ಮಂಗಳೂರು ವರದಿಗಾರರನ್ನ ಸಂಪರ್ಕಿಸಿದಾಗ ಅಶೋಕ್ ಹಲಾಯಿ ಎಂಬಾತ ನಕಲಿ ಪತ್ರಕರ್ತ ಎನ್ನುವುದು ಬೆಳಕಿಗೆ ಬಂದಿದೆ. ಆ ಬಳಿಕ ಆತನ ಮಾಹಿತಿ ಕಲೆ ಹಾಕಿದಾಗ ಈತ ಯಾವುದೋ ಯೂ ಟ್ಯೂಬ್ ಚಾನೆಲ್ ನಡೆಸುತ್ತಿದ್ದು, ಅದರ ಹೆಸರಿನ ಜೊತೆ ಖಾಸಗಿ ನ್ಯೂಸ್ ಚಾನೆಲ್ ಹೆಸರಲ್ಲೂ ಬ್ಲ್ಯಾಕ್ ಮೇಲ್ ಗೆ ಇಳಿದಿದ್ದ ಎನ್ನುವುದು ಗೊತ್ತಾಗಿದೆ. ಹೀಗಾಗಿ ಎಸ್.ವಿ.ಎಸ್ ಆಡಳಿತ ಮಂಡಳಿಯಿಂದ ಆತನ ದೂರವಾಣಿ ಸಂಖ್ಯೆ ಪಡೆದ ಬಳಿಕ ಅದೇ ಚಾನೆಲ್ ನ ಅಧಿಕೃತ ಮಂಗಳೂರು ವರದಿಗಾರರು ಆತನಿಗೆ ಕರೆ ಮಾಡಿ ಪೊಲೀಸ್ ದೂರು ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಆ ಬಳಿಕ ಆತ ಆ 50 ಸಾವಿರದ ಚೆಕ್ ಅನ್ನು ಶಿಕ್ಷಣ ಸಂಸ್ಥೆಗೆ ವಾಪಾಸ್ ಕೊಟ್ಟು ಕ್ಷಮೆ ಕೋರಿ ಪೊಲೀಸ್ ದೂರು ನೀಡದಂತೆ ಅಂಗಲಾಚಿ ಕಾಲ್ಕಿತ್ತಿದ್ದಾನೆ. ಸದ್ಯ ಈತನ ವಿರುದ್ದ ಎಸ್.ವಿ.ಎಸ್ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿ ಬಂಟ್ವಾಳ ನಗರ ಠಾಣೆಗೆ ದೂರು ನೀಡಿದೆ.