Karavali
ಕೊಲ್ಲೂರು: ಮುಜರಾಯಿ ದೇವಾಲಯಗಳಿಗೆ ಶೀಘ್ರ ಸಾವಿರ ಸಿಬ್ಬಂದಿ ನೇಮಕ - ಸಚಿವ ಕೋಟ ಶ್ರೀನಿವಾಸ ಪೂಜಾರಿ
- Thu, Oct 03 2019 09:02:08 AM
-
ಕೊಲ್ಲೂರು, ಅ 3 (Daijiworld News/RD): ರಾಜ್ಯದಲ್ಲಿ ಮುಜರಾಯಿ ಇಲಾಖೆಯ ಅಧೀನದಲ್ಲಿರುವ ದೇವಾಲಯಗಳಲ್ಲಿ ಸಾಕಷ್ಟು ವರ್ಷದಿಂದ ಸಿಬ್ಬಂದಿಗಳ ಕೊರತೆ ಕಂಡುಬಂದಿದ್ದು, ಈ ಬಾರಿ ತಾನು ಮುಜರಾಯಿ ಇಲಾಖೆಯ ಸಚಿವನಾಗಿ ಅಧಿಕಾರ ವಹಿಸಿಕೊಂಡ ಮೊದಲ ಸಭೆಯಲ್ಲಿಯೇ, ಮುಜರಾಯಿ ದೇವಾಲಯಗಳಿಗೆ ಒಂದು ಸಾವಿರ ಸಿಬ್ಬಂದಿಗಳನ್ನು ನೇಮಕಾತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ, ಇದರ ಅನುಮೋದನೆಗಾಗಿ ಈಗಾಗಲೇ ಹಣಕಾಸು ಇಲಾಖೆಗೆ ಪ್ರಸ್ತಾವನೆ ಕಳುಹಿಸಿಕೊಡಲಾಗಿದೆ ಎಂದು ರಾಜ್ಯದ ಮುಜರಾಯಿ, ಮೀನುಗಾರಿಕಾ ಹಾಗೂ ಬಂದರು ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಬುಧವಾರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದಲ್ಲಿ ಸುಮಾರು 21 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಮೂಕಾಂಬಿಕಾ ಅನ್ನಪ್ರಸಾದ ಭೋಜನ ಶಾಲೆಯ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.ಸಾಮೂಹಿಕ ವಿವಾಹ: ರಾಜ್ಯದ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ೩೪ ಸಾವಿರ ದೇವಾಲಯಗಳಿದ್ದು, ಅದರಲ್ಲಿ 190 ಎ ದರ್ಜೆಯ ದೇವಾಲಯಗಳಿವೆ. ಇತ್ತೀಚಿನ ವರ್ಷಗಳಲ್ಲಿ ಅವುಗಳ ಆದಾಯದಲ್ಲಿ ಸಾಕಷ್ಟು ಹೆಚ್ಚಳವಾಗುತ್ತಿದ್ದು, ಭಕ್ತರ ಹಣ ಸಧ್ವೀನಿಯೋಗವಾಗಬೇಕು ಎನ್ನುವುದು ಇಲಾಖೆಯ ಇಂಗಿತವಾಗಿದ್ದು, ಆ ಹಿನ್ನೆಲೆಯಲ್ಲಿ ಯೋಜನೆ ರೂಪಿಸಲಾಗುತ್ತಿದೆ. ದೇವಾಲಯಗಳು ಸಮಾಜಮುಖಿಯಾಗಿ ಕೆಲಸ ಮಾಡಬೇಕೆಂಬ ಚಿಂತನೆಯಿಂದ, ಮುಜರಾಯಿ ಇಲಾಖೆಯ ದೇವಾಲಯಗಳಿಂದ ಪ್ರತಿವರ್ಷ ಒಂದು ಸಾವಿರ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಬೇಕು ಎನ್ನುವ ಯೋಜನೆ ರೂಪಿಸಲಾಗಿದ್ದು, ಅದರಲ್ಲಿಯೂ ರಾಜ್ಯದ ಎರಡನೇ ಶ್ರೀಮಂತ ದೇವಾಲಯವಾದ ಕೊಲ್ಲೂರು ದೇವಳದಿಂದ ಪ್ರತಿ ವರ್ಷ ನೂರು ಸಾಮೂಹಿಕ ವಿವಾಹ ಕಾರ್ಯ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದರು.
ದೇವಾಲಯಗಳಿಂದ ಗೋಶಾಲೆ: ಮುಜರಾಯಿ ಇಲಾಖೆಯ ದೇವಾಳಯಗಳ ಮೂಲಕ ಗೋ ಶಾಲೆ ನಿರ್ಮಿಸುವ ಬಗ್ಗೆ ಈಗಾಗಲೇ ಸರ್ಕಾರ ಚಿಂತನೆ ನಡೆಸಿದೆ ಎಂದ ಅವರು ಈ ಬಗ್ಗೆ ರಾಜ್ಯದ 30 ಜಿಲ್ಲೆಗಳಲ್ಲಿಯೂ ಜಾಗ ಗುರುತಿಸುವ ಕೆಲಸವಾಗುತ್ತಿದ್ದು, ಪ್ರಸ್ತುತ ವರ್ಷದಿಂದ ಸುಮಾರು 15-20 ದೇವಾಲಯಗಳಿಂದ ಗೋಶಾಲೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಈ-ಹುಂಡಿ ಜಾರಿ: ಮುಜರಾಯಿ ಇಲಾಖೆಯ ದೇವಾಲಯಗಳಿಗೆ ಭಕ್ತರು ನಗದು, ಚಿನ್ನ ಮೊದಲಾದವುಗಳನ್ನು ತಲುಪಿಸಲು ಅನುಕೂಲವಾಗುವಂತೆ ಈ-ಹುಂಡಿ ಜಾರಿ ಮಾಡಲು ಚಿಂತನೆ ನಡೆಸಲಾಗಿದೆ ಎಂದ ಅವರು ಇದರಿಂದಾಗಿ ಭಕ್ತರ ಹಣ ಪಾರದರ್ಶಕವಾಗಿ ದೇವಾಲಯಗಳಿಗೆ ತಲುಪಿ, ದೇವಾಲಯದ ಆದಾಯದಲ್ಲಿಯೂ ದ್ವಿಗುಣಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದರು.
ಆನ್ಲೈನ್ ಬುಕ್ಕಿಂಗ್ : ದೇವಾಲಯಗಳಲ್ಲಿ ನಡೆಯುವ ಯಕ್ಷಗಾನ, ಚಂಡಿಕಾ ಹೋಮ, ಚಿನ್ನದ ರಥ ಸೇವೆ ಸೇರಿದಂತೆ ನಾನಾ ಸೇವೆಗಳನ್ನು ಭಕ್ತರು ಆನ್ಲೈನ್ ಮೂಲಕ ನೋಂದಾವಣೆ ಮಾಡಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಧಾರ್ಮಿಕ ದತ್ತಿ ಇಲಾಖೆಯ ಅಧೀನದಲ್ಲಿರುವ ದೇವಾಲಯಗಳು ಸಾಮಾನ್ಯ ಜನರ ಮಧ್ಯೆ ಕೆಲಸ ಮಾಡುತ್ತಿದ್ದು, ದೇವಾಲಯಗಳ ಸಂಪತ್ತನ್ನು ಕ್ರೋಢಿಕರಿಸಿ ಅದರಲ್ಲಿ ಸಮಾಜಮುಖಿ ಕೆಲಸ ಮಾಡುವ ಮೂಲಕ ಸಾಮಾಜಿಕ ನ್ಯಾಯ ಕಲ್ಪಿಸಿಕೊಡುವ ಇರಾದೆ ಸರ್ಕಾರ ಹೊಂದಿದೆ ಎಂದರು.
ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾನು ಶಾಸಕನಾಗುವ ಮುನ್ನ, ಸುಮಾರು 10 ವರ್ಷಗಳ ಕಾಲ ಈ ದೇವಾಲಯದ ಆಡಳಿತ ಮೋಕ್ತೇಸರನಾಗಿ ಸೇವೆ ಸಲ್ಲಿಸಿದ್ದು, ತನ್ನ ಅಧಿಕಾರವಧಿಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದೇನೆ ಎಂಬ ಆತ್ಮಗೌರವ ನನಗಿದೆ ಎಂದರು. ನಮ್ಮ ಅಧಿಕಾರವಧಿಯಲ್ಲಿ ಈ ದೇಗುಲಕ್ಕೆ ೪೦ ಕೋಟಿ ರೂ. ವೆಚ್ಚದ ಚಿನ್ನದ ರಥ ನಿರ್ಮಾಣ ಮಾಡಲಾಗಿದ್ದು, ಅದರಿಂದಾಗಿಯೇ ಈಗ ಪ್ರತಿ ದಿನ ೩೦ ಸಾವಿರ ರೂ. ಆದಾಯ ದೇಗುಲಕ್ಕೆ ಬರುತ್ತಿದೆ, ಆದರೆ ಆ ಸಂದರ್ಭ ನನ್ನ ವಿರುದ್ಧ ವಿನಾ ಕಾರಣ ಲೋಕಯುಕ್ತಕ್ಕೆ ದೂರು ಸಲ್ಲಿಕೆಯಾಗಿದ್ದು, ಅದರಿಂದ ಮನನೊಂದು ಸುಮಾರು 7 ವರ್ಷ ದೇವಾಲಯಕ್ಕೆ ಭೇಟಿ ನೀಡಿಲ್ಲ ಎಂದು ಭಾವುಕರಾಗಿ ನುಡಿದರು.
ತಾನು ಮೋಕ್ತೇಸರನಾಗಿದ್ದ ಅವಧಿಯಲ್ಲಿ ಕೊಲ್ಲೂರು ದೇವಳದಿಂದ ೫ ಪ್ರೌಢಶಾಲೆ, ಒಂದು ಪದವಿಪೂರ್ವ ಕಾಲೇಜು, ದೇವಾಲಯದ ಸ್ವಾಗತ ಗೋಪುರ, ಸಭಾಭವನ, ಭೋಜನಾಲಯ ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದು, ೨೩ ಶಾಲೆಗಳಿಗೆ ದೇವಾಲಯದಿಂದ ಬಿಸಿಯೂಟ ಕಲ್ಪಿಸಿರುವುದಲ್ಲದೇ ಬಡವರಿಗೆ ವೈದ್ಯಕೀಯ ನೆರವು, ಚಿಕ್ಕಪುಟ್ಟ ದೇವಾಲಯಗಳ ಜೀರ್ಣೋದ್ಧಾರಕ್ಕೆ ಸೇರಿದಂತೆ ಹಲವು ಸಮಾಜಮುಖಿ ಕಾರ್ಯ ಮಾಡಲಾಗುತ್ತಿದೆ ಎಂದರು.
೨೫೦ ಕೋಟಿ ಅನುದಾನ: ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾನಾ ಅಭಿವೃದ್ಧಿ ಕಾರ್ಯಗಳಿಗೆ ಸುಮಾರು ೨೫೦ ಕೋಟಿ ರೂ. ಅನುದಾನ ಮಂಜೂರಾಗಿದ್ದು, ಒಂದೆರೆಡು ತಿಂಗಳಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುವುದು, ಹೆಮ್ಮಾಡಿ- ಕೊಲ್ಲೂರು ದ್ವಿಪಥ ರಸ್ತೆ ನಿರ್ಮಾಣಕ್ಕೆ ಅನುದಾನ ಮಂಜೂರಾತಿಯ ಹಂತದಲ್ಲಿದೆ, ಅಲ್ಲದೇ ಬೈಂದೂರು ಕ್ಷೇತ್ರದಲ್ಲಿ ಶಾಶ್ವತ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ೩೭೦ ಕೋಟಿ ರೂ. ವೆಚ್ಚದ ನೀಲಿನಕಾಶೆ ಸಿದ್ದಪಡಿಸಲಾಗಿದ್ದು, ಅದು ಸಿಎಂ ಗಮನಕ್ಕೆ ತಂದು ಮಂಜೂರಾತಿ ದೊರಕಿಸಿಕೊಡುವ ಕೆಲಸಮಾಡಲಾಗುವುದು ಎಂದರು.ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರೀಶ್ಕುಮಾರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಸುಮಾರು ೭೦ ಸಾವಿರ ಚದರ ಅಡಿಯ ಈ ಭೋಜನಾಲಯಕ್ಕೆ ೨೦೧೪ರಲ್ಲಿ ಶಂಕುಸ್ಥಾಪನೆ ಮಾಡಲಾಗಿದೆ, ಇದರಲ್ಲಿ ಪ್ರತಿದಿನ ೨೦ ಸಾವಿರಕ್ಕೂ ಅಧಿಕ ಭಕ್ತರು ಅನ್ನಪ್ರಸಾದ ಸ್ವೀಕರಿಸಬಹುದಾಗಿದೆ, ಈ ಭೋಜನಾಲಯದಲ್ಲಿ ಹೈಜನಿಕ ಸಲಕರಣೆಗಳನ್ನು ಅಳವಡಿಸಲಾಗಿದ್ದು, ರಾಜ್ಯದಲ್ಲಿಯೇ ಮಾದರಿ ಭೋಜನಾಲಯವಾಗಿದೆ ಎಂದರು.
ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್, ಸದಸ್ಯರಾದ ಅರ್ಚಕ ಕೆ.ವಿ. ಶ್ರೀಧರ ಅಡಿಗ, ಜಯಂತಿ ವಿಜಯಕೃಷ್ಣ ಪಡುಕೋಣೆ, ಅಂಬಿಕಾ ದೇವಾಡಿಗ, ರಮೇಶ ಗಾಣಿಗ, ರಾಜೇಶ್ ಕಾರಂತ, ಅಭಿಲಾಷ್ ಪಿ.ವಿ, , ಎಡಿಸಿ ಸದಾಶಿವ ಪ್ರಭು, ಎಎಸ್ಪಿ ಕುಂದಾಪುರ ಹರಿರಾಮ್ ಶಂಕರ್, ಬೈಂದೂರು ತಹಶೀಲ್ದಾರ ಬಿ.ಪಿ. ಪೂಜಾರ್, ತಾ.ಪಂ. ಸದಸ್ಯೆ ಗ್ರೀಷ್ಮಾ ಬಿಢೆ, ಗ್ರಾ.ಪಂ. ಅಧ್ಯಕ್ಷ ಎಸ್. ಕುಮಾರ ಉಪಸ್ಥಿತರಿದ್ದರು. ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ವಂಡಬಳ್ಳಿ ಜಯರಾಮ ಶೆಟ್ಟಿ ಸ್ವಾಗತಿಸಿದರು, ನರಸಿಂಹ ಹಳಗೇರಿ ವಂದಿಸಿದರು.