ಮಂಗಳೂರು, ಅ 02 (DaijiworldNews/SM): ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಗಾಂಧಿ ಜಯಂತಿಯ 150ನೆ ವರ್ಷಾಚರಣೆಯ ಅಂಗವಾಗಿ ಪತ್ರಕರ್ತ ದಿ.ನಾಗೇಶ್ ಪಡು ಸ್ಮರಣಾರ್ಥ ನಗರದ ನೆಹರು ಮೈದಾನದಲ್ಲಿ ಹಮ್ಮಿಕೊಂಡ ಫ್ರೆಂಡ್ ಶಿಫ್ ಕ್ರಿಕೆಟ್ ಪಂದ್ಯದಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯ ತಂಡ ಗೆಲುವು ದಾಖಲಿಸಿದೆ.
ಜಿಲ್ಲಾಧಿಕಾರಿ ತಂಡ ಹಾಗೂ ಮಂಗಳೂರು ವಿಶ್ವವಿದ್ಯಾನಿ ಲಯದ ತಂಡದ ನಡುವೆ ನಡೆದ ಅಂತಿಮ ಪಂದ್ಯದಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯ ತಂಡ ಜಯಗಳಿಸಿತು. ಜಿಲ್ಲಾಧಿಕಾರಿಗಳ ತಂಡ ದ್ವಿತೀಯ ಪ್ರಶಸ್ತಿ ಪಡೆಯಿತು. ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಡಿಸಿ ತಂಡದ ಸುಧೀರ್, ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಮಂಗಳೂರು ವಿ.ವಿ ತಂಡದ ಸಂದೀಪ್, ಉತ್ತಮ ಬೌಲರ್ ಆಗಿ ಮಂಗಳೂರು ವಿ.ವಿ ತಂಡದ ಮಲ್ಲಿಕಾರ್ಜುನ ಸ್ವಾಮಿ, ಉತ್ತಮ ದಾಂಡಿಗನಾಗಿ ಮಂಗಳೂರು ವಿ.ವಿ.ತಂಡದ ಕಿರಣ್ ಪ್ರಶಸ್ತಿ ಪಡೆದು ಕೊಂಡರು.
ಒಟ್ಟು 7ತಂಡಗಳು ಪಂದ್ಯದಲ್ಲಿ ಭಾಗವಹಿಸಿದ್ದವು. ಸಮಾರಂಭದ ಅಧ್ಯಕ್ಷತೆವಹಿಸಿದ್ದ ಕರಾವಳಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಗಣೇಶ್ ರಾವ್ ವಿಜೇತ ತಂಡಕ್ಕೆ ಪ್ರಶಸ್ತಿ ವಿತರಿಸಿ ಅಭಿನಂದಿಸಿ ಮಾತನಾಡಿ ಮಂಗಳೂರು ಶಾಂತಿ, ಸೌಹಾರ್ದತೆಯೊಂದಿಗೆ ಬದುಕುವ ಜನಸಮೂಹದ ಪ್ರದೇಶವಾಗಿ, ಮಾದಕ ವ್ಯಸನಮುಕ್ತ ನಗರವಾಗಿ ಗುರುತಿಸುವಂತಾಗಬೇಕು. ಮಂಗಳೂರಿನ ಸೌಹಾರ್ದತೆಗೆ ಧಕ್ಕೆಯಾಗದಂತೆ ನಾವೆಲ್ಲರೂ ಬಂದಾಗ ಬೇಕಾಗಿದೆ. ಇಲ್ಲಿನ ಜಲ ಹಾಗೂ ಪ್ರಾಕೃತಿಕ ಸಂಪತ್ತಿನ ರಕ್ಷಣೆ ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ. ಈ ನಿಟ್ಟಿನಲ್ಲಿ ಬ್ರ್ಯಾಂಡ್ ಮಂಗಳೂರು ಪರಿಕಲ್ಪನೆ ಶ್ಲಾಘನೀಯ ಎಂದರು.
ಅಕಾಲ ಮರಣಕ್ಕೀಡಾದ ನಾಗೇಶ್ ಪಡು ಅವರ ಕುಟುಂಬಕ್ಕೆ ತಾನು ವೈಯಕ್ತಿಕವಾಗಿ ಸಹಾಯ ನೀಡುವ ಭರವಸೆ ನೀಡಿದರು. ಸಂಘದ ಅಧ್ಯಕ್ಷ ಶ್ರೀ ನಿವಾಸ ನಾಯಕ್ ಇಂದಾಜೆ, ಉಪ ಪೊಲೀಸ್ ಆಯುಕ್ತ ಅರುಣಾಂಶುಗಿರಿ, ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಉಪಸ್ಥಿತರಿದ್ದರು. ತೀರ್ಪುಗಾರರಾದ ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣದ ನಿರ್ದೇಶಕ ಕಿಶೋರ್ ಹಾಗೂ ತಂಡದ ಸದಸ್ಯರಾದ ವಿಗ್ನೇಶ್ ಭಟ್,ಲೋಕೇಶ್, ಪ್ರವೀಣ್ ಭಾಗವಹಿಸಿದ್ದರು.
ಇನ್ನು ನೆಹರು ಮೈದಾನದಲ್ಲಿ ಹಮ್ಮಿಕೊಂಡ ಫ್ರೆಂಡ್ ಶಿಫ್ ಕ್ರಿಕೆಟ್ ಪಂದ್ಯವನ್ನು ಜಿಲ್ಲಾಧಿಕಾರಿ ಸಿಂಧೂ.ಬಿ. ರೂಪೇಶ್ ಉದ್ಘಾಟಿಸಿ ಶುಭ ಹಾರೈಸಿದರು. ಪೊಲೀಸ್ ಕಮೀಷನರ್ ಡಾ.ಪಿ.ಎಸ್.ಹರ್ಷ ನಾಣ್ಯ ಚಿಮ್ಮುವ ಮೂಲಕ ಮೊದಲ ಪಂದ್ಯಕ್ಕೆ ಚಾಲನೆ ನೀಡಿದರು. ಪ್ಲಾಸ್ಟಿಕ್ ಬಳಸದೆ ಪರಿಸರ ಉಳಿಸಿ ಮಾಹಿತಿ ಪತ್ರವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀ ಪ್ರಸಾದ್ ಚಾಲನೆ ನೀಡಿದರು.