ಬಂಟ್ವಾಳ, ಅ 2 (Daijiworld News/RD): ಪ್ರತೀದಿನ ಕೈಯಲ್ಲಿ ಪೆನ್ನು ಹಿಡಿದುಕೊಂಡು ದಂಡಾಧಿಕಾರಿಯ ಖದರ್ ನಲ್ಲಿ ಕಾಣಿಸಿಕೊಳ್ಳುವ ಬಂಟ್ವಾಳ ತಹಶೀಲ್ದಾರರ ರಶ್ಮೀ ಎಸ್.ಆರ್ ರವರು, ಇಂದು ಬೆಳ್ಳಂಬೆಳಿಗ್ಗೆ ಕೈಯಲ್ಲಿ ಪೊರಕೆ ಹಿಡಿದುಕೊಂಡು ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಗಾಂಧಿ ಜಯಂತಿಯ ಅಂಗವಾಗಿ ಬುಧವಾರ ಬೆಳ್ಳಂಬೆಳಿಗ್ಗೆ ಕೈಯಲ್ಲಿ ಪೊರಕೆ ಹಿಡಿದುಕೊಂಡು ಮಿನಿವಿಧಾನ ಸೌಧದಲ್ಲಿ ಕಾಣಿಸಿಕೊಂಡ ತಹಶೀಲ್ದಾರ್ ರಶ್ಮೀ ಎಸ್.ಆರ್ ರವರು, ಸ್ವತಃ ತಾವೇ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದರು. ಅವರ ಜೊತೆ ತಾಲೂಕು ಕಚೇರಿಯ ಇತರ ಉದ್ಯೋಗಸ್ಥರೂ ಕೈ ಜೋಡಿಸಿದರು.
ಅಧಿಕಾರಿ- ಸಿಬ್ಬಂದಿಗಳೆಂಬ ಬೇಧ ಇಲ್ಲದೇ ಎಲ್ಲರೂ ಸಮಾನ ಮನಸ್ಕರಾಗಿ ಸ್ವಚ್ಚತಾ ಕೆಲಸದಲ್ಲಿ ತೊಡಗಿಸಿಕೊಂಡರು. ಅವರೆಲ್ಲರೂ ಕೈಯಲ್ಲಿ ಪೊರಕೆ ಹಿಡಿದು, ಬಕೆಟ್, ಮೋಪ್ ಹಿಡಿದು, ಕಚೇರಿ ವಠಾರ ಹಾಗೂ ಮಿನಿವಿಧಾನ ಸೌಧದ ಒಳಗೂ ಸ್ವಚ್ಛತಾ ಕಾರ್ಯ ನಡೆಸಿದರು.
ಬಂಟ್ವಾಳ ತಹಶೀಲ್ದಾರ್, ಕಾರ್ಯನಿರ್ವಹಕ ದಂಡಾಧಿಕಾರಿ ರಶ್ಮಿ ಎಸ್.ಆರ್. ಅವರ ನೇತೃತ್ವದಲ್ಲಿ ನಡೆದ ಸ್ವಚ್ಚತಾ ಕಾರ್ಯಕ್ರಮದಲ್ಲಿ ತಾಲೂಕು ಕಚೇರಿಯ ಉಪತಹಶೀಲ್ದಾರ್ ರಾಜೇಶ್ ನಾಯ್ಕ್, ರವಿಶಂಕರ್ ಸಿ ಎಮ್. ಪ್ರಭಾರ ಉಪತಹಶೀಲ್ದಾರ್ ಸೀತಾರಾಮ ಪಾಣೆಮಂಗಳೂರು ಹೋಬಳಿ ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ, ವಿಟ್ಲ ಕಂದಾಯ ನಿರೀಕ್ಷಕ ದಿವಾಕರ ಮುಗುಳಿಯ, ಬಂಟ್ವಾಳ ಕಂದಾಯ ನಿರೀಕ್ಷಕ ನವೀನ್ ಬೆಂಜನಪದವು ಇಲಾಖಾ ಅಧಿಕಾರಿಗಳು, ಸಿಬ್ಬಂದಿಗಳು ಭಾಗವಹಿಸಿದರು.
ಕಚೇರಿಯ ಆವರಣವನ್ನು ಸಾಮೂಹಿಕವಾಗಿ ಸ್ವಚ್ಛಗೊಳಿಸಲಿರುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಪರಿಸರ ಪ್ರಜ್ಞೆ ಮೂಡಿಸಲು ಇದೊಂದು ಜಾಗೃತಿ ಕಾರ್ಯಕ್ರಮ ಎಂದು ತಹಶೀಲ್ದಾರ್ ರಶ್ಮಿ ಎಸ್. ಆರ್. ಪ್ರತಿಕ್ರಿಯಿಸಿದರು. ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸ್ವಚ್ಚತಾ ಆಂದೋಲನದ ಮೂಲಕ ಪರಿಸರ ಜಾಗೃತಿ ಮೂಡಿಸಿದರು. ಆಡಳಿತ ಶಾಖೆ, ಚುನಾವಣಾ ಶಾಖೆ, ಆಹಾರ ಶಾಖೆ, ಭೂ ಸುಧಾರಣೆ ಶಾಖೆ, ನಾಡಕಚೇರಿ ಮತ್ತಿತರ ವಿಭಾಗಗಳ ನೌಕರರು ಸ್ವಚ್ಚತಾ ಕಾರ್ಯ ನಿರ್ವಹಿಸಿದರು.
ಎಲ್ಲಾ ಇಲಾಖಾ ಕಚೇರಿಗಳಲ್ಲಿಯೂ ಇಂತಹಾ ಸ್ವಚ್ಚತಾ ಕಾರ್ಯ ನಡೆಸಬೇಕೆಂಬುದಕ್ಕೆ ಈ ಕಾರ್ಯಕ್ರಮ ಪ್ರೇರಣೆಯಾಗಿತ್ತು. ಸರಕಾರಿ ರಜೆಯಲ್ಲೂ ಸಹದ್ಯೋಗಿಗಳ ಜೊತೆ ಸೇರಿಕೊಂಡು ಕಛೇರಿ ಸ್ವಚ್ಚತಾ ಕಾರ್ಯದಲ್ಲಿ ತೊಡಗಿ, ಗಾಂಧಿ ಜಯಂತಿಯನ್ನು ಅರ್ಥಪೂರ್ಣವಾಗಿಸಿದ ತಹಶೀಲ್ದಾರರ ಕ್ರಿಯಾಶೀಲತೆಗೆ ಸಾರ್ವಜನಿಕ ವಲಯದಲ್ಲೂ ಪ್ರಶಂಸೆ ವ್ಯಕ್ತವಾಗಿದೆ.