ಮಂಗಳೂರು, ಅ 2 (Daijiworld News/RD): ರಾಷ್ಟ್ರಪಿತ ಮಹಾತ್ಮ ಗಾಂಧಿಗೆ ಗುಡಿ ಕಟ್ಟಿಸಿ, ನಿತ್ಯ ಪೂಜೆ ಸಲ್ಲಿಸುವ ಅಪರೂಪದ ದೇವಾಲಯವೊಂದು ಕರಾವಳಿಯಲ್ಲಿದೆ. ಇದು ಮಂಗಳೂರು ಕಂಕನಾಡಿಯ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದಲ್ಲಿ ಮಹಾತ್ಮನ ಗುಡಿಯಿದೆ. ಈ ಬಾರಿಯೂ ಗಾಂಧಿ ಜಯಂತಿ ಅಂಗವಾಗಿ ಗುಡಿಯನ್ನು ಹೂವುಗಳಿಂದ ಅಲಂಕರಿಸಿ ಪೂಜೆ ಮಾಡಲಾಯಿತು.
ಪ್ರತಿವರ್ಷವೂ ಅ.2ರಂದು ಮಹಾತ್ಮ ಗಾಂಧೀಜಿಗೆ ಫಲವಸ್ತು, ಹಾಲು, ಬಾಳೆಹಣ್ಣಿನ ನೈವೇದ್ಯ ಅರ್ಪಣೆ ಮಾಡುವ ಮೂಲಕ ವಿಶೇಷ ಪೂಜೆ ಇಲ್ಲಿ ನಡೆಯುತ್ತಿದೆ. ಜೊತೆಗೆ ಈ ದಿನ ಶ್ರೀ ಗಣಪತಿ ದೇವರ ವಿಗ್ರಹ ಹಾಗೂ ಬ್ರಹ್ಮ ಬೈದರ್ಕಳ ಮೂರ್ತಿಗೆ ಪಲ್ಲಕ್ಕಿ ಉತ್ಸವವೂ ನಡೆಯುತ್ತದೆ.
ಬಾಪೂಜಿಯ 150ನೇ ಜನ್ಮದಿನದ ಅಂಗವಾಗಿ ಈ ಬಾರಿಯೂ ಗಾಂಧಿ ಜಯಂತಿಯನ್ನು ಆಚರಿಸಲಾಗಿದ್ದು, ಗುಡಿಯನ್ನು ಹೂವುಗಳಿಂದ ಅಲಂಕರಿಸಲಾಗಿದೆ. ಜೊತೆಗೆ ಬೆಳಗ್ಗೆ ಒಂಬತ್ತು ಗಂಟೆಗೆ ಗಾಂಧಿ ಪ್ರತಿಮೆಗೆ ವಿಶೇಷ ಅರ್ಚನೆ ಮೂಲಕ ಗಾಂಧಿ 150 ಚಿಂತನಾ ಯಾತ್ರೆಗೆ ಚಾಲನೆ ಸಿಗಲಿದೆ.
ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಮಹತ್ಮ ಗಾಂಧೀಜಿ ಮೂರು ಬಾರಿ ಮಂಗಳೂರಿಗೆ ಆಗಮಿಸಿ, ಇಲ್ಲಿನ ಜನತೆಗೆ ಹೋರಾಟಕ್ಕೆ ಸ್ಫೂರ್ತಿ ನೀಡಿದ್ದರು. ಹಾಗಾಗಿ ಅವರ ಅಹಿಂಸಾ ತತ್ವ, ಆದರ್ಶಗಳ ಆರಾಧನೆ ಇಲ್ಲಿ ನಡೆಯುತ್ತಿದೆ. ಗಾಂಧಿ ಚಿಂತನೆಯಂತೆ ಕ್ಷೇತ್ರದ ಸ್ವಚ್ಛತೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ.