ಮಂಗಳೂರು ಜ 2 : ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ರದ್ದು ಮಾಡಿ ಅದರ ಬದಲು ರಾಷ್ಟ್ರೀಯ ವೈದ್ಯ ಆಯೋಗ (ಎನ್ಎಂಸಿ) ರಚನೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ರಾಷ್ಟ್ರೀಯ ವೈದ್ಯ ಆಯೋಗ ಮಸೂದೆ-2017ನ್ನು ವಿರೋಧಿಸಿ ಮಂಗಳವಾರ ದೇಶಾದ್ಯಂತ ಹೊರ ರೋಗಿಗಳ ವಿಭಾಗವನ್ನು ಬಂದ್ ಮಾಡಿ ಪ್ರತಿಭಟನೆಗೆ ವೈದ್ಯರು ಕರೆ ನೀಡಿದ್ದಾರೆ. ಆದ್ರೆ ಇದಕ್ಕೆ ಮಂಗಳವಾರ ರಾಜ್ಯಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಂಗಳೂರಿನ ಪ್ರಮುಖ ಆಸ್ಪತ್ರೆಗಳಾದ ಮಣಿಪಾಲ್, ಅಪೋಲೋ, ನಾರಾಯಣ ನೇತ್ರಾಲಯ ಸೇರಿದಂತೆ ಪ್ರಮುಖ ಆಸ್ಪತ್ರೆಗಳಲ್ಲಿ ಎಂದಿನಂತೆ ಒಪಿಡಿ ಸೇವೆ ಲಭ್ಯವಿದೆ. ಮೈಸೂರಿನಲ್ಲಿ ಎಲ್ಲಾ ಖಾಸಗಿ ಆಸ್ಪತ್ರೆಗಳು ಒಪಿಡಿ ಸೇವೆ ನೀಡುತ್ತಿದೆ. ಬೆಳಗಾವಿಯಲ್ಲೂ ಹೆಚ್ಚಿನ ಆಸ್ಪತ್ರೆಗಳು ಎಂದಿನಂತೆ ಒಪಿಡಿ ಸೇವೆ ನೀಡುತ್ತಿವೆ. ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಹೊರ ರೋಗಿಗಳ ವಿಭಾಗ (ಒಪಿಡಿ)ದ ಸೇವೆಗಳನ್ನು ಬಂದ್ ಮಾಡಲು ಕರೆ ನೀಡಲಾಗಿತ್ತು. ರಾಷ್ಟ್ರೀಯ ವೈದ್ಯಕೀಯ ಆಯೋಗ ಜಾರಿ ಮಾಡುವ ಬಗ್ಗೆ ಇರುವ ಮಸೂದೆ ಮಂಗಳವಾರ ಸಂಸತ್ ನಲ್ಲಿ ಚರ್ಚೆಗೆ ಬರಲಿದೆ.
ಸಾಂದರ್ಭಿಕ ಚಿತ್ರ