ಮಂಗಳೂರು ಜ 2 : ವೀಸಾ ಅವಧಿ ಮುಗಿದಿದ್ದರೂ ನಗರದಲ್ಲಿ ವಾಸವಾಗಿದ್ದ ಘಾನಾ ದೇಶದ ಪ್ರಜೆ ಚೀಕೋಝಿ ಫ್ರಾನ್ಸಿಸ್ ಕ್ರಿಸ್ಟೋಫರ್( 37) ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಎರಡು ವರ್ಷಗಳ ಕಠಿಣ ಶಿಕ್ಷೆ ಮತ್ತು 15000 ದಂಡ ವಿಧಿಸಿದಿದೆ.
ಆತನು ತನ್ನ ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ವಾಸವಾಗಿದ್ದಲ್ಲದೆ, ಇಲ್ಲಿ ಮಾದಕ ದ್ರವ್ಯಗಳ ವ್ಯವಹಾರವನ್ನು ನಡೆಸುತ್ತಿದ್ದ. ಆತ 2017 ಜನವರಿಯಲ್ಲಿ ಬೆಂದೂರು ಸೈಂಟ್ ಆಗ್ನೇಸ್ ಬಳಿಯ ಲೋಬೋ ರೋಡ್ ನಲ್ಲಿ ಮಾದಕ ವಸ್ತುಗಳನ್ನು ಮಾರಾಟಕ್ಕೆ ಯತ್ನಿಸುತ್ತಿದ್ದಾಗ ನಗರದ ಸಿಸಿಬಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ವಿಚಾರಣೆ ನಡೆಸಿದಾಗ ವೀಸಾ ಅವಧಿ ಮುಗಿದಿರುವುದು ಬೆಳಕಿಗೆ ಬಂದಿತ್ತು. ಕದ್ರಿ ಪೋಲಿಸ್ ಇನ್ಸ್ ಪೆಕ್ಟರ್ ಮಾರುತಿ ಜಿ ನಾಯಕ್ ನ್ಯಾಯಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಲಯದ ನ್ಯಾಯಧೀಶ ಕೆ.ಎಸ್ ಬೀಳಗಿ ಅವರು ಪಾಸ್ ಪೋರ್ಟ್ ಕಾಯ್ದೆಯ ಅಡಿಯಲ್ಲಿ ಅಪರಾಧ ಸಾಬೀತಾಗಿವೆ ಎಂಬ ತೀರ್ಮಾನಕ್ಕೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಆದರೆ ಈತನ ವಿರುದ್ದ ಮಾದಕ ದ್ರವ್ಯ ಮಾರಾಟ ಮಾಡಿದ ಆರೋಪ ಸಾಬೀತಾಗದೆ ಆರೋಪದಿಂದ ಖುಲಾಸೆಗೊಳಿದ್ದಾರೆ. ಜೈಲು ಶಿಕ್ಷೆ ಮುಗಿದ ತಕ್ಷಣ ಆತನ ಖರ್ಚಿನಲ್ಲಿಯೇ ಆತನ ದೇಶಕ್ಕೆ ಗಡೀಪಾರು ಮಾಡಬೇಕೆಂದು ನ್ಯಾಯಲಯ ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದೆ.