ಕಾಸರಗೋಡು, ಸೆ 30 (Daijiworld News/MSP): ಯುವ ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಕೃಪೇಶ್ ಮತ್ತು ಶರತ್ ಲಾಲ್ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಿ ಕೇರಳ ಹೈಕೋರ್ಟ್ ತೀರ್ಪು ನೀಡಿದೆ. ಕ್ರೈಂ ಬ್ರಾಂಚ್ ಸಲ್ಲಿಸಿದ್ದ ದೋಷಾರೋಪವನ್ನು ಹೈಕೋರ್ಟ್ ರದ್ದುಗೊಳಿಸಿದೆ. ಕೊಲೆ ಪ್ರಕರಣದ ತನಿಖೆಯಲ್ಲಿ ಗಂಭೀರ ಲೋಪ ಉಂಟಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಪ್ರಥಮ ಆರೋಪಿಯ ವೇದವಾಕ್ಯವನ್ನು ಕೇಳಿ ತನಿಖಾ ತಂಡ ತನಿಖೆ ನಡೆಸಿತ್ತು ಎಂದು ಹೈಕೋರ್ಟ್ ಛೀಮಾರಿ ಹಾಕಿದೆ. ಕೃತ್ಯದಲ್ಲಿ ಸಿಪಿಎಂ ಮುಖಂಡರು ಒಳಗೊಂಡಿದ್ದು , ಇದರಿಂದ ತನಿಖೆಯಲ್ಲಿ ಲೋಪ ಉಂಟಾಗಲು ಕಾರಣ ಎಂದು ಹೈಕೋರ್ಟ್ ಹೇಳಿದೆ. ಕ್ರೈಂ ಬ್ರಾಂಚ್ ತನಿಖೆ ಬಗ್ಗೆ ಹೈಕೋರ್ಟ್ ಸಂಶಯ ವ್ಯಕ್ತಪಡಿಸಿತು. 2019 ರ ಫೆಬ್ರವರಿ 17 ರಂದು ಪೆರಿಯದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಕೃಪೇಶ್ ಮತ್ತು ಶರತ್ ಲಾಲ್ ರನ್ನು ಕೊಲೆಗೈಯ್ಯಲಾಗಿತ್ತು.
ತನಿಖಾ ತಂಡಕ್ಕೆ ಲಭಿಸಿದ ಮಾರಾಕಾಸ್ತ್ರವನ್ನು ಫಾರೆನ್ಸಿಕ್ ತಪಾಸಣೆ ನಡೆಸಲಿಲ್ಲ. ಕೃತ್ಯದಲ್ಲಿ ಸಿಪಿಎಂ ಸ್ಥಳೀಯ ಮುಖಂಡ ಪೀತಾಂಬರನ್ ಸೇರಿದಂತೆ 11 ಮಂದಿಯನ್ನು ತನಿಖಾ ತಂಡ ಬಂಧಿಸಿತ್ತು . ಪೀತಾಂಬರನ್ ಗೆ ಶರತ್ ಲಾಲ್ ಜೊತೆಗಿನ ಪೂರ್ವ ದ್ವೇಷ ಕೊಲೆಗೆ ಕಾರಣ ಎಂದು ಕ್ರೈಂ ಬ್ರಾಂಚ್ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿತ್ತು. 229 ಮಂದಿಯಿಂದ ಸಾಕ್ಷಿ ಪಡೆಯಲಾಗಿತ್ತು ಎಂದು ಆರೋಪ ಪಟ್ಟಿಯಲ್ಲಿ ತಿಳಿಸಿದ್ದು , 12 ವಾಹನ ಸೇರಿದಂತೆ 125 ಸೊತ್ತುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು .
ಪೀತಾಂಬರನ್ ಅಲ್ಲದೆ ಸಜಿ ಸಿ.ಜೋರ್ಜ್, ಕೆ .ಎಂ ಸುರೇಶ್, ಅನಿಲ್ ಕುಮಾರ್ , ಗಿಜಿನ್ , ಶ್ರೀರಾಗ್, ಅಶ್ವಿನ್, ಸುಭೀಷ್, ಮುರಳಿ, ರಂಜಿತ್ , ಪ್ರದೀಪ್ , ಆಲಕ್ಕೋಡ್ ಮಣಿ , ಸಿಪಿಎಂ ಪೆರಿಯ ಸ್ಥಳೀಯ ಕಾರ್ಯದರ್ಶಿ ಎನ್. ಬಾಲಕೃಷ್ಣನ್ , ಉದುಮ ವಲಯ ಕಾರ್ಯದರ್ಶಿ ಕೆ . ಮಣಿಕಂಠನ್ ಆರೋಪಿಗಳೆಂದು ಗುರುತಿಸಲಾಗಿತ್ತು.