ಕುಂದಾಪುರ, ಸೆ 30 (Daijiworld News/MSP): ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ನಿಯಮದಂತೆ ಹೆದ್ದಾರಿಯ ಇಕ್ಕೆಲಗಳಲ್ಲಿ ನಿರ್ಮಿಸಬೇಕಾದ ಸರ್ವೀಸ್ ರಸ್ತೆ ನಿರ್ಮಾಣಕ್ಕೆ ಮೀನಮೇಷ ನಡೆಸುತ್ತಿರುವುದನ್ನು ವಿರೋಧಿಸಿ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ನೇತೃತ್ವದಲ್ಲಿ ಸಾಲಿಗ್ರಾಮ ಸರ್ವಿಸ್ ರಸ್ತೆ ಹೋರಾಟ ಸಮಿತಿಯ ಸಹಯೋಗದೊಂದಿಗೆ ಕುಮ್ರಗೋಡು ಮಾಬುಕಳದಿಂದ ಕೋಟದ ವರೆಗೆ ಸೋಮವಾರ ಸಂಜೆ ಬೃಹತ್ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯ ಸಂದರ್ಭ ಮಾತನಾಡಿದ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿಯ ಅಧ್ಯಕ್ಷ ಪ್ರತಾಪ್ ಶೆಟ್ಟಿ ಸಾಸ್ತಾನ, ಕೋಟದಿಂದ ಮಾಬುಕಳದವರೆಗೆ ಸರ್ವಿಸ್ ರಸ್ತೆ ಇಲ್ಲದೆ ವಾಹನ ಸವಾರರಿಗೆ ಮಾತ್ರವಲ್ಲದೇ ಸಾರ್ವಜನಿಕರಿಗೆ ತೀವ್ರವಾದ ಸಮಸ್ಯೆ ಉಂಟಾಗುತ್ತಿದೆ. ಅಲ್ಲದೆ ಅಪಘಾತಗಳು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಆನಸಾಮಾನ್ಯರ ಮೂಲಭೂತ ಸಮಸ್ಯೆಗಳನ್ನು ಪರಿಹರಿಸದೇ ಸಂಚಾರ ನಿಯಮಗಳನ್ನು ಜನರ ಮೇಲೆ ಹೇರಲಾಗುತ್ತಿದೆ. ಮೊದಲು ಸರ್ವೀಸ್ ರಸ್ತೆ ನಿರ್ಮಿಸಿ ಎಂದು ಆಗ್ರಹಿಸಿದರು.
ಸಾಲಿಗ್ರಾಮ ಸರ್ವಿಸ್ ರಸ್ತೆ ಹೋರಾಟ ಸಮಿತಿಯ ಕಾರ್ಯದರ್ಶಿ ನಾಗರಾಜ್ ಗಾಣಿಗ ಮಾತನಾಡಿ ಜನಸಾಮಾನ್ಯರಿಗೆ ಅವಶ್ಯಕವಾದ ಸರ್ವಿಸ್ ರಸ್ತೆಯನ್ನು ನಿರ್ಮಿಸದೆ ಒಂದೆಡೆ ಟೋಲ್ ಸಂಗ್ರಹಿಸಲಾಗುತ್ತಿದೆ ಎಂದು ನವಯುಗ ಕಂಪನಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಪೋಲಿಸ್ ಇಲಾಖೆಯ ದರ್ಪದ ವಿರುದ್ಧ ಕೂಡ ಕೆಂಡಮಂಡಲವಾದರು, ಸರ್ವಿಸ್ ರಸ್ತೆಯ ಆಗದೆ ಪೋಲಿಸ್ ಇಲಾಖೆ ವಾಹನ ಸವಾರರಿಗೆ ದಂಡ ವಿಧಿಸಿದರೆ ಉಗ್ರ ಹೋರಾಟ ಇಲಾಖೆ ವಿರುದ್ಧ ಮಾಡಬೇಕಾದೀತು. ಅಲ್ಲದೆ ನಾವು ಚುನಾಯಿಸಿ ಕಳುಹಿಸಿದ ಜನಪ್ರತಿನಿಧಿಗಳು ಈ ಬಗ್ಗೆ ಆಸಕ್ತಿ ವಹಿಸಿ ನಮ್ಮ ಹೋರಾಟದಲ್ಲಿ ಭಾಗಿಯಾಗಬೇಕು ಎಂದು ಹೇಳಿದರು.
ಆದರೆ ಜಿಲ್ಲೆಯ ಯಾವೊಬ್ಬ ಜನಪ್ರತಿನಿಧಿಯೂ ಪ್ರತಿಭಟನೆಯ ಸಂದರ್ಭ ಹಾಜರಾಗದೇ ಇದ್ದುದು ಮಾತ್ರ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು. ಮಹಿಳಾ ಕಲಾವಿದರಿಂದ ಚೆಂಡೆ ವಾದನ ಹಾಗೂ ಪುರುಷ ಕಲಾವಿದರಿಂದ ಡೋಲು ವಾದನ ಮೆರವಣಿಗೆಯ ಮೆರುಗನ್ನು ಹೆಚ್ಚಿಸಿತ್ತು. ಸಾಲಿಗ್ರಾಮ ಸರ್ವಿಸ್ ರಸ್ತೆ ಹೋರಾಟ ಸಮಿತಿಯ ಅಧ್ಯಕ್ಷ ಶ್ಯಾಮಸುಂದರ ನಾಯಿರಿ, ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿಯ ವಿಠಲ್ ಪೂಜಾರಿ ಐರೋಡಿ, ಅಲ್ವಿನ್ ಅಂದ್ರೆ, ಪ್ರಶಾಂತ್ ಶೆಟ್ಟಿ ಪಾಂಡೇಶ್ವರ, ಮಾಬುಕಳ ಆಟೋ ಚಾಲಕ ಮಾಲಕರ ಸಂಘ, ಜಿಲ್ಲಾ ಲಾರಿ ಮಾಲಕರ ಸಂಘದ ಅಧ್ಯಕ್ಷ ರಾಜೇಶ್ ಕಾವೇರಿ, ಬಿ. ಕಿಶೋರ್ ಸೇರಿದಂತೆ ನೂರಾರು ಜನ ಮೆರವಣಿಗೆಯಲ್ಲಿ ಭಾಗವಹಿಸಿದರು.